Hubli News: ಹುಬ್ಬಳ್ಳಿ: ಕಳೆದ 35 ವರ್ಷದಿಂದ ಕಾಶ್ಮೀರದ ಹಿಂದೂಗಳ ಸುರಕ್ಷತೆಗಾಗಿ ಹೋರಾಡುತ್ತಿರುವ ಪನೂನು ಕಾಶ್ಮೀರ ಸಂಘಟನೆಗೆ ಬೆಂಬಲಿಸಲು, ಜುಲೈ 13 ರಂದು ಕಾಶ್ಮೀರದಲ್ಲಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆಂದು ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು 35 ವರ್ಷಗಳಿಂದ ಐದು ಲಕ್ಷಕ್ಕೂ ಅಧಿಕ ಕಾಶ್ಮೀರ ಹಿಂದೂಗಳು ಅತಂತ್ರರಾಗಿದ್ದಾರೆ. ಅವರು ತಮ್ಮ ಮೂಲ ಸ್ಥಾನಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ, ಮನೆ, ದೇವಸ್ಥಾನ ಪುನಃ ನಿರ್ಮಿಸಲಾಗುತ್ತಿಲ್ಲ, ಅಷ್ಟೇ ಅಲ್ಲದೇ ಅವರು ತೋಟ, ಗದ್ದೆಗಳನ್ನು ಪಡೆಯಲಾಗುತ್ತಿಲ್ಲ, ಅಲ್ಲಿನ ಕಾಶ್ಮೀರ ಹಿಂದೂಗಳು ಸಂತ್ರಸ್ಥರಾಗಿದ್ದಾರೆ. ಅವರಿಗೆ ಯಾವೊಂದು ಸವಲತ್ತುಗಳು ಸಿಗುತ್ತಿಲ್ಲ, ಈ ದಿಸೆಯಲ್ಲಿ ಕೇಂದ್ರ ಹಾಗೂ ಸ್ಥಳೀಯ ರಾಜ್ಯ ಸರ್ಕಾರ ಕಾಶ್ಮೀರ ಹಿಂದೂಗಳಿಗೆ ರಕ್ಷಣೆ ಹಾಗೂ ಸವಲತ್ತುಗಳನ್ನು ಒದಗಿಸಬೇಕೆಂದು ಒತ್ತಾಯಿಸಿ ಹೋರಾಟದ ಹಾದಿಯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಮಾವೇಶದಲ್ಲಿ ಮುಖ್ಯವಾಗಿ ಐದು ಲಕ್ಷ ಕಾಶ್ಮೀರಿ ಹಿಂದೂಗಳಿಗೆ ಸವಲತ್ತುಗಳು ಒದಗಿಸಿ, ರಕ್ಷಣೆ ನೀಡುವುದು, ಹಿಂದೂಗಳ ಮನೆ, ತೋಟ, ಗುಡಿ, ಮಠ ಹಾಗೂ ಪವಿತ್ರ ಕ್ಷೇತ್ರಗಳನ್ನು ಒದಗಿಸಬೇಕು, ಸರ್ಕಾರದಿಂದ ಮನೆಗೆ ಶಸ್ತ್ರ ಒದಗಿಸುವುದು, ಕಾಶ್ಮೀರ ಹಿಂದೂಗಳಿಗೆ ರಾಜಕೀಯ ಪ್ರತಿನಿಧಿ ಮೀಸಲು ಕೊಡಬೇಕೆಂದು ಒತ್ತಾಯ ಮಾಡಲಾಗುವುದು. ಅಂದು ಮುಂದಿನ ಹೋರಾಟದ ಕುರಿತಾಗಿ ಪ್ರಮುಖ ಚರ್ಚೆಗಳನ್ನು ಮಾಡಿ ನಿರ್ಣಯ ಕೈಗೊಳ್ಳಲಾಗುವುದು ಎಂದರು.