ಇಂಡಿಯನ್ ಫಿಲ್ಮ್ ಫ್ಯಾಕ್ಟರಿ ಮತ್ತು ದೀಪಕ್ ರಾಣೆ ಫಿಲ್ಮ್ಸ್ ಸಹಭಾಗಿತ್ವದಲ್ಲಿ ನಿರ್ಮಾಪಕರಾದ ವಿಜಯ್ ಕುಮಾರ್ ಶೆಟ್ಟಿ, ರಮೇಶ್ ಕೊಠಾರಿ ಮತ್ತು ದೀಪಕ್ ರಾಣೆ ನಿರ್ಮಾಣದ ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿರುವ ಮರಾಠಿಯ ವಿರಾಟ್ ಮಡ್ಕೆ ಮತ್ತು ಶಿವಾನಿ ಸುರ್ವೆ ವಿಶೇಷವಾಗಿ ಕಾಣಿಸಿಕೊಳ್ಳುತ್ತಿರುವ ಸಡಗರ ರಾಘವೇಂದ್ರ ನಿರ್ದೇಶನದ ಕನ್ನಡ ಮರಾಠಿ ಹಿಂದಿ ತೆಲುಗು ತಮಿಳು ಮಲಯಾಳಂ ಭಾಷೆಯಲ್ಲಿ ಸಿದ್ಧವಾಗುತ್ತಿರುವ ಹೆಚ್ಚಿನ ನಿರೀಕ್ಷೆ ಮೂಡಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ಮುಂದಿನ ಹಂತದ ಚಿತ್ರೀಕರಣಕ್ಕೆ ಮುನ್ನ ಶೀರ್ಷಿಕೆ ಅನಾವರಣ.
ಬಹುತೇಕ ಹೊರಾಂಗಣ ಚಿತ್ರೀಕರಣ ಹೊಂದಿರುವ ಚಿತ್ರತಂಡಕ್ಕೆ ವಾರಾಂತ್ಯದ ಕರ್ಫ್ಯೂ ಇತ್ಯಾದಿಯಿಂದ ಚಿತ್ರೀಕರಣಕ್ಕೆ ಸ್ವಲ್ಪ ಮಟ್ಟಿನ ಹಿನ್ನಡೆಯುಂಟಾಗಿತ್ತು. ತದನಂತರ ಆರಂಭಗೊಂಡು ಚಿಕ್ಕಮಗಳೂರಿನ ಚಿತ್ರೀಕರಣದ ವೇಳೆಯಲ್ಲಿ ಜರುಗಿದ ಅವಘಡದಲ್ಲಿ ನಾಯಕ ಕವೀಶ್ ಶೆಟ್ಟಿ ಕಾಲಿಗೆ ಪೆಟ್ಟು ಬಿದ್ದು ಅನಿರೀಕ್ಷಿತವಾಗಿ ಚಿತ್ರೀಕರಣಕ್ಕೆ ತಾತ್ಕಾಲಿಕವಾಗಿ ತಡೆ ಬಿತ್ತು. ಸ್ವಲ್ಪ ಎತ್ತರದಿಂದ ಜಿಗಿಯುವ ಸಂದರ್ಭದಲ್ಲಿ ಈ ಅನಾಹುತ ಜರುಗಿದ್ದು ಅದೃಷ್ಟವಶಾತ್ ದೊಡ್ಡ ಮಟ್ಟದ ಅನಾಹುತದಿಂದ ಕವೀಶ್ ಶೆಟ್ಟಿ ಬಚಾವಾಗಿದ್ದಾರೆ. ವೈದ್ಯರ ಸಲಹೆ ಮೇರೆಗೆ ಕವೀಶ್ ಶೆಟ್ಟಿ ಮೂರು ವಾರಗಳ ವಿಶ್ರಾಂತಿ ಪಡೆಯುತ್ತಿದ್ದಾರೆ. ಯಾವುದೇ ಮುಚ್ಚುಮರೆಯಿಲ್ಲದೆ ಎಲ್ಲವನ್ನೂ ಬಿಚ್ಚಿಡುವ ನಿರ್ದೇಶಕ ಸಡಗರ ರಾಘವೇಂದ್ರ, ಒಬ್ಬ ನಿರ್ದೇಶಕನಾಗಿ ತುಂಬಾ ಒಳ್ಳೆಯ ಲೋಕೇಷನಲ್ಲಿ ಒಂದು ಅದ್ಭುತ ಶಾಟ್ ದೊರೆತರೆ ಅದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಎನ್ನುವ ನನ್ನದೊಂದು ವೃತ್ತಿಪರ ದುರಾಸೆ. ಆ ಕಾರಣಕ್ಕೆ ನಾಯಕ ಕವೀಶ್ ಶೆಟ್ಟಿ ಸ್ವಲ್ಪ ದಿನ ನೋವು ಅನುಭವಿಸಬೇಕಾಯಿತು ಈ ಬಗ್ಗೆ ಸಣ್ಣದೊಂದು ಬೇಸರ ಈಗಲೂ ಕಾಡುತ್ತದೆ. ಆದರೂ ಕವೀಶ್ ಶೆಟ್ಟಿಯ ಹುಮ್ಮಸ್ಸು ಮತ್ತು ವೃತ್ತಿಪರವಾಗಿ ಅವರ ತೊಡಗಿಕೊಳ್ಳುವಿಕೆ ಇಂತಹ ಮತ್ತೊಂದು ಪ್ರಯತ್ನಕ್ಕೆ ಸ್ಪೂರ್ತಿಯಾದರೂ ತಪ್ಪಿಲ್ಲ ಎನ್ನುತ್ತಾ ಸಣ್ಣದೊಂದು ಮುಗುಳ್ನಗೆ ಬೀರುವ ನಿರ್ದೇಶಕ ಸಡಗರ ರಾಘವೇಂದ್ರ ನಿಜಕ್ಕೂ ತಾನೊಬ್ಬ ಅದೃಷ್ಟಶಾಲಿ ನಿರ್ದೇಶಕ ಎನ್ನುತ್ತಾರೆ. ಯಾಕೆಂದರೆ, ನನ್ನ ಚೊಚ್ಚಲ ನಿರ್ದೇಶನದ ಚಿತ್ರವಿದಾದರೂ ನಾಯಕ ಕವೀಶ್ ಶೆಟ್ಟಿ, ನಾಯಕಿ ಮೇಘಾ ಶೆಟ್ಟಿಯಿಂದ ಹಿಡಿದು ಮರಾಠಿಯ ತಾರೆಗಳಾದ ವಿರಾಟ್ ಮಡ್ಕೆ, ಶಿವಾನಿ ಸುರ್ವೆ ಉಳಿದ ಎಲ್ಲಾ ಸಹ ಕಲಾವಿದರು, ಇಡೀ ತಂತ್ರಜ್ಞರ ತಂಡ ಮತ್ತು ನಿರ್ಮಾಪಕರು ನಿರೀಕ್ಷೆಗೂ ಮೀರಿ ಸಹಕಾರ ನೀಡುತ್ತಿರುವುದು ನಿಜಕ್ಕೂ ಸಂತಸದ ವಿಚಾರ.
ಏತನ್ಮಧ್ಯೆ ಹಾಡುಗಳ ಸಾಹಿತ್ಯವನ್ನು ಅಂತಿಮಗೊಳಿಸುವ ಕೆಲಸದಲ್ಲಿ ಬಿಜಿಯಾಗಿರುವ ನಿರ್ದೇಶಕರು ಸಂಗೀತ ನಿರ್ದೇಶಕ ಬಾಂಬೆಯ ಪ್ರಾಂಶು ಝಾ ಚಿತ್ರಕ್ಕಾಗಿ ವಿಶೇಷವಾದ ಹಾಡುಗಳನ್ನು ಸಂಯೋಜಿಸಿದ್ದಾರೆ, ಕನ್ನಡದ ಹೆಸರಾಂತ ಚಿತ್ರ ಸಾಹಿತಿಗಳು ಸಾಹಿತ್ಯ ಬರೆಯುತ್ತಿದ್ದಾರೆ. ಹಾಡುಗಳು ಈ ಚಿತ್ರದ ಇನ್ನೊಂದು ತಾಕತ್ತು ಎನ್ನುತ್ತಾ ಟೈಟಲ್ ವಿಚಾರಕ್ಕೆ ಬಂದಾಗ ಮುಗುಳ್ನಗೆ ಬೀರುತ್ತಾ ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಇಷ್ಟೋತ್ತಿಗೆ ಚಿತ್ರದ ಶೀರ್ಷಿಕೆ ಅನಾವರಣಗೊಳಿಸುತ್ತಿದ್ದೆವು. ಕವೀಶ್ ಶೆಟ್ಟಿ ಬಹುತೇಕ ಚೇತರಿಸಿಕೊಂಡಿದ್ದಾರೆ ಈ ತಿಂಗಳ ಅಂತ್ಯದಲ್ಲಿ ಮತ್ತೊಂದು ಹಂತದ ಚಿತ್ರೀಕರಕ್ಕೆ ಸಿದ್ಧತೆ ನಡೆಯುತ್ತಿದೆ ಅದಕ್ಕೂ ಮೊದಲು ಖಂಡಿತವಾಗಿಯೂ ಶೀರ್ಷಿಕೆಯ ಜೊತೆಗೆ ಉಳಿದ ಕಲಾವಿದರು ಮತ್ತು ತಂತ್ರಜ್ಞರ ಹೆಸರುಗಳನ್ನು ಖಂಡಿತವಾಗಿಯೂ ಅನಾವರಣಗೊಳಿಸುತ್ತೇವೆ ಎನ್ನುವ ಮೂಲಕ ಮಾತಿಗೆ ತೆರೆ ಬಿತ್ತು.