ತಾಳಿ ಕಟ್ಟುವ ಮುನ್ನ ಖಾಕಿ ಎಂಟ್ರಿ; ನಿಂತುಹೋದ ಅದ್ಧೂರಿ ಮದುವೆ!

ವಯಸ್ಸು ತುಂಬದ ಬಾಲಕಿಗೆ ಮದುವೆ ಮಾಡಲು ಮುಂದಾಗಿದ್ದ ಪೋಷಕರಿಗೆ ಅಧಿಕಾರಿಗಳು ಶಾಕ್ ನೀಡಿದ್ದಾರೆ. ರಿಸೆಪ್ಷನ್ ಮುಗಿಸಿ ತಾಳಿ ಕಟ್ಟಬೇಕಿದ್ದ ಸಂಭ್ರಮದ ಕ್ಷಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ದಾಳಿ ನಡೆಸಿ ವಿವಾಹವನ್ನು ತಡೆದಿದ್ದಾರೆ.

ನೆಲಮಂಗಲದ ಕಾವಾಡಿ ಮಠದ ಕಲ್ಯಾಣ ಮಂಟಪದಲ್ಲಿ ಕೇಶವ್ ಗೌಡ ಹಾಗೂ ಕೋಮಲ ಅವರ ವಿವಾಹ ನಿಶ್ಚಯವಾಗಿತ್ತು. ನಿನ್ನೆ ರಾತ್ರಿ ಅದ್ಧೂರಿಯಾಗಿ ರಿಸೆಪ್ಷನ್ ಕಾರ್ಯಕ್ರಮವೂ ನಡೆದಿತ್ತು. ಆದರೆ ಇಂದು ತಾಳಿ ಕಟ್ಟುವ ಕೆಲವೇ ಸಮಯದ ಮೊದಲು ಅಧಿಕಾರಿಗಳು ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ಬಾಲಕಿಗೆ 18 ವರ್ಷ ತುಂಬಿದೆ ಎಂದು ಭಾವಿಸಿ ಪೋಷಕರು ಮದುವೆ ನಿಶ್ಚಯಿಸಿದ್ದರು.

ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಅನಿತಾ ಲಕ್ಷ್ಮಿ ನೇತೃತ್ವದ ತಂಡ ವಧುವಿನ ದಾಖಲೆಗಳನ್ನು ಪರಿಶೀಲಿಸಿದಾಗ, ಆಕೆಗೆ 18 ವರ್ಷ ತುಂಬಲು ಇನ್ನೂ ನಾಲ್ಕು ತಿಂಗಳು ಬಾಕಿ ಇರುವುುದು ದೃಢಪಟ್ಟಿದೆ. ಮದುವೆಗೆ ಈಗಾಗಲೇ ಸುಮಾರು 5 ಲಕ್ಷ ರೂಪಾಯಿ ಖರ್ಚಾಗಿದೆ ಎಂದು ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದರು. ಆದರೂ ಕಾನೂನಿಗೆ ತಲೆಬಾಗಿ ಮದುವೆಯನ್ನು ನಿಲ್ಲಿಸಿದರು.

ಇನ್ನೂ ನಾಲ್ಕು ತಿಂಗಳ ನಂತರ ಅದೇ ಹುಡುಗಿಯನ್ನು ಮದುವೆಯಾಗುತ್ತೇನೆ ಎಂದು ವರ ಕೇಶವ್ ಗೌಡ ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಬಾಲ್ಯ ವಿವಾಹ ಕಾನೂನುಬಾಹಿರ ಎಂಬ ಬಗ್ಗೆ ಪೋಷಕರಿಗೆ ಅಧಿಕಾರಿಗಳು ತಿಳಿಹೇಳಿದರು.

About The Author