Hubli Cricket News: ಹುಬ್ಬಳ್ಳಿ :ಕ್ರೀಡಾಂಗಣದಲ್ಲಿ ತಮ್ಮ ಸ್ಟೈಲಿಶ್ ಬ್ಯಾಟಿಂಗ್ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿರುವ ಕನ್ನಡಿಗ, ಟೀಂ ಇಂಡಿಯಾ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಮೈದಾನದವರೆಗೂ ತಮ್ಮ ಸಾಮಾಜಿಕ ಕಾರ್ಯಗಳನ್ನು ಮುಂದುವರಿಸಿದ್ದಾರೆ. ಕೊಟ್ಟ ಮಾತಿನಂತೆ ನಡೆದುಕೊಂಡ ಪದವಿ ವಿದ್ಯಾರ್ಥಿಗೆ ಎರಡನೆಯ ವರ್ಷದ ಶುಲ್ಕವನ್ನು ಪಾವತಿ ಮಾಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪೂರದ ಬಿಕಾಂ ವಿದ್ಯಾರ್ಥಿ ಅಮೃತ ಮಾವಿನಕಟ್ಟಿ ಅವರಿಗೆ ಕೆಎಲ್ ರಾಹುಲ್ ಸಹಾಯ ಮಾಡಿದ್ದಾರೆ. ಹುಬ್ಬಳ್ಳಿಯ ಕೆ.ಎಲ್.ಇ. ವಿ.ವಿ.ಯಲ್ಲಿ ವಿದ್ಯಾರ್ಥಿ ಅಭ್ಯಾಸ ಮಾಡುತ್ತಿದ್ದು, ಆರ್ಥಿಕ ತೊಂದರೆಯಿಂದ ವಿದ್ಯಾಭ್ಯಾಸ ಮುಂದುವರಿಸಲಾಗದ ಸ್ಥಿತಿಯಲ್ಲಿದ್ದ ವಿದ್ಯಾರ್ಥಿಗೆ ಅಗತ್ಯ ನೆರವು ನೀಡಿದ್ದಾರೆ.
ಕೆ.ಎಲ್.ರಾಹುಲ್ ಕಳೆದ ವರ್ಷ ಬಿಕಾಂ ಮೊದಲನೇ ವರುಷದ ವಿದ್ಯಾಭ್ಯಾಸಕ್ಕಾಗಿಯೂ ಸಹಾಯ ಮಾಡಿದ್ದರು. ಆ ವೇಳೆ ಮುಂದೆಯೂ ನೆರವು ನೀಡುವ ಭರಸವೆ ನೀಡಿದ್ದರು. ಈಗ ಎರಡನೇ ವರುಷದ ಶುಲ್ಕವನ್ನು ಕೆ.ಎಲ್ ರಾಹುಲ್ ಅವರೇ ಭರಿಸಿದ್ದಾರೆ. ಸುಮಾರು 75 ಸಾವಿರ ರೂಪಾಯಿ ಶುಲ್ಕವನ್ನು ರಾಹುಲ್ ಪಾವತಿ ಮಾಡಿದ್ದು, ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.
ಇನ್ನು, ಕೆ.ಎಲ್ ರಾಹುಲ್ ಅವರಿಂದ ನೆರವು ಪಡೆದುಕೊಂಡಿರುವ ವಿದ್ಯಾರ್ಥಿ ಅಮೃತ್ ಕೂಡ ಅವರ ನಿರೀಕ್ಷೆಯನ್ನು ಹುಸಿ ಮಾಡಿಲ್ಲ. ಮೊದಲನೇ ವರುಷದ ಬಿಕಾಂನಲ್ಲಿ ಶೇಕಡಾ 9.3 ಅಂಕಗಳನ್ನು ಗಳಿಸುವ ಮೂಲಕ ನಂಬಿಕೆ ಉಳಿಸಿಕೊಂಡಿದ್ದಾರೆ.
ಅಂದಹಾಗೇ, ಕೆಎಲ್ ರಾಹುಲ್ ಬಡ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿರುವುದು ಇದೇ ಮೊದಲೇನು ಅಲ್ಲ. ಕಳೆದ ವರ್ಷ ಧಾರವಾಡದ ಕುಟುಂಬದ ವಿದ್ಯಾರ್ಥಿನಿಗೂ ಕೆ.ಎಲ್ ರಾಹುಲ್ ಸಹಾಯ ಮಾಡಿದ್ದರು. ಕನ್ನಡಿಗರು ವಿದ್ಯಾವಂತರಾಗಬೇಕೆಂಬ ಇಚ್ಚೆಯಿಂದ ಹುಬ್ಬಳ್ಳಿಯ ಮಂಜುನಾಥ ಹೆಬಸೂರ ಮೂಲಕ ಸೃಷ್ಟಿ ಕುಲಾವಿ ಎಂಬ ವಿದ್ಯಾರ್ಥಿನಿಯ ಶಾಲೆಯ ಶುಲ್ಕವನ್ನು ಭರಿಸಿದ್ದರು.
ಕೆ.ಎಲ್ ರಾಹುಲ್ ಅವರಿಂದ ನೆರವು ಪಡೆದುಕೊಂಡಿರುವ ಅಮೃತ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ರಾಹುಲ್ ಅವರ ನಿರೀಕ್ಷೆಗೆ ತಕ್ಕಂತೆ ವಿದ್ಯಾಭ್ಯಾಸ ಮಾಡ್ತೇನೆ, ಅವರು ನೀಡಿರುವ ಆರ್ಥಿಕ ನೆರವಿಗೆ ಅಭಾರಿ ಅಂತ ಕೃತಜ್ಞತೆ ಸಲ್ಲಿಸಿದ್ದಾರೆ.