ಬೆಂಗಳೂರು: ಪಕ್ಷಕ್ಕೆ ಕೈ ಕೊಟ್ಟು ರಾಜೀನಾಮೆ ನೀಡಿ ದೋಸ್ತಿ ಸರ್ಕಾರ ಪತನವಾಗಲು ಕಾರಣರಾದ ಶಾಸಕರನ್ನು ಅನರ್ಹಗೊಳಿಸಿ ಸೇಡು ತೀರಿಸಿಕೊಂಡಿರೋ ಕೆಪಿಸಿಸಿ, ಇದೀಗ ಅನರ್ಹ ಶಾಸಕರ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ಕೆಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೂ ಕೊಕ್ ನೀಡಿದೆ.
ಪಕ್ಷಾಂತರ ಕಾಯ್ದೆ ಹೇರಿ ಅತೃಪ್ತರನ್ನು ಅನರ್ಹಗೊಳಿಸಿರುವ ಕಾಂಗ್ರೆಸ್ ಇದೀಗ ಅವರ ಕ್ಷೇತ್ರಗಳ ವ್ಯಾಪ್ತಿಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಪದಾದಿಕಾರಿಗಳನ್ನು ವಜಾಗೊಳಿಸಿ, ಕಾರ್ಯಕಾರಿ ಸಮಿತಿಯನ್ನೂ ವಿಸರ್ಜಿಸಿ ಆದೇಶ ಹೊರಡಿಸಿದೆ. ಕಾಂಗ್ರೆಸ್ ನ ಅನರ್ಹ ಶಾಸಕರಾದ ಅಥಣಿಯ ಮಹೇಶ್ ಕುಮಟಳ್ಳಿ ಕ್ಷೇತ್ರ, ರಮೇಶ್ ಜಾರಕಿಹೊಳಿ ಕ್ಷೇತ್ರ ಗೋಕಾಕ್, ಶಿವರಾಮ್ ಹೆಬ್ಬಾರ್ ಕ್ಷೇತ್ರ ಯಲ್ಲಾಪುರ, ಬಿ.ಸಿ ಪಾಟೀಲ್ ಕ್ಷೇತ್ರ ಹಿರೇಕೇರೂರು, ಆನಂದ್ ಸಿಂಗ್ ಕ್ಷೇತ್ರ ಬಳ್ಳಾರಿಯ ವಿಜಯನಗರ, ಭೈರತಿ ಬಸವರಾಜು ಕ್ಷೇತ್ರ ಕೆ.ಆರ್ ಪುರಂ, ಎಸ್.ಟಿ ಸೋಮಶೇಖರ್ ಕ್ಷೇತ್ರ ಬೆಂಗಳೂರಿನ ಯಶವಂತಪುರ, ಮುನಿರತ್ನ ಕ್ಷೇತ್ರ ರಾಜರಾಜೇಶ್ವರಿ ನಗರ, ರೋಷನ್ ಬೇಗ್ ಕ್ಷೇತ್ರ ಶಿವಾಜಿನಗರ ಹಾಗೂ ಡಾ.ಕೆ ಸುಧಾಕರ್ ಕ್ಷೇತ್ರ ಚಿಕ್ಕಬಳ್ಳಾಪುರದಿಂದ ತಲಾ ಇಬ್ಬರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ವಜಾಗೊಳಿಸಿರುವ ಕೆಪಿಸಿಸಿ, ಎಂಟಿಬಿ ನಾಗರಾಜ್ ಕ್ಷೇತ್ರ ಹೊಸಕೋಟೆಯ ಮೂವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೂ ಕೊಕ್ ನೀಡಿದೆ.
ಇನ್ನು ತಕ್ಷಣದಿಂದ ಕೆಪಿಸಿಸಿ ನೀಡಿರುವ ಆದೇಶ ಜಾರಿಗೆ ಬರುವಂತೆ ಅಧ್ಯಕ್ಷ ದಿನೇಶ್ ಗುಂಡೂರಾವ್ ಆದೇಶಿಸಿದ್ದಾರೆ.ಹಾಗೆ ಸಮಿತಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯನ್ನೂ ಕೂಡ ಕೆಪಿಸಿಸಿ ವಿಸರ್ಜಿಸಲಾಗಿದೆ.