“ಕೃಷ್ಣಾ” ಸಂತ್ರಸ್ತರ ಬಾಳಲ್ಲಿ ಹೊಸ ಭರವಸೆ

ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಗಾಗಿ ಸ್ವಾಧೀನಗೊಂಡ ಭೂಮಿಗೆ, ಕೊನೆಗೂ ಪರಿಹಾರ ನಿಗದಿಯಾಗಿದೆ. ಸೆಪ್ಟಂಬರ್‌ 16ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ, ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಮುಳುಗಡೆಯಾಗುವ 75,563 ಎಕರೆ ಪ್ರದೇಶದಲ್ಲಿ, ಪ್ರತಿ ಎಕರೆ ನೀರಾವರಿ ಭೂಮಿಗೆ 40 ಲಕ್ಷ ರೂಪಾಯಿ, ಹಾಗೂ ಒಣ ಭೂಮಿಗೆ 30 ಲಕ್ಷ ರೂ. ಪರಿಹಾರ ನೀಡಲು ತೀರ್ಮಾನಿಸಲಾಗಿದೆ.

ಕಾಲುವೆಗಳ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳುತ್ತಿರುವ 51,837 ಎಕರೆಗೆ ಸಂಬಂಧಿಸಿದಂತೆ, ನೀರಾವರಿ ಜಮೀನಿಗೆ ಎಕರೆಗೆ 30 ಲಕ್ಷ ರೂ. ಒಣ ಜಮೀನಿಗೆ 25 ಲಕ್ಷ ರೂ. ನಿಗದಿ ಮಾಡಿರುವುದಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಒಂದೇ ಹಂತದಲ್ಲಿ 1 ಲಕ್ಷದ 33 ಸಾವಿರದ 867 ಎಕರೆ ಭೂಸ್ವಾಧೀನಕ್ಕೆ ತೀರ್ಮಾನಿಸಲಾಗಿದೆ. ಇದಕ್ಕೆ 70,000 ಕೋಟಿಗೂ ಹೆಚ್ಚು ಪರಿಹಾರ ನೀಡಬೇಕಾಗಿದ್ದು, ಮುಂದಿನ 3 ಆರ್ಥಿಕ ವರ್ಷಗಳಲ್ಲಿ ಪರಿಹಾರ ನೀಡುವುದಾಗಿ, ಸಿದ್ದರಾಮಯ್ಯ ತಿಳಿಸಿದ್ದಾರೆ.

 

ರೈತರ ಪುನರ್ವಸತಿ ಹಾಗೂ ಪುನರ್‌ ವ್ಯವಸ್ಥೆ ಕಾರ್ಯಗಳಿಗೆ, 6,469 ಎಕರೆ ಜಮೀನಿನ ಅವಶ್ಯಕತೆಯಿದೆ. ಇದರಿಂದ ಸುಮಾರು 20 ಗ್ರಾಮಗಳು, ಕೆಲ ವಾರ್ಡ್‌ಗಳು ಮುಳುಗಡೆಯಾಗಲಿದೆ. ಇದಕ್ಕಾಗಿ ಪ್ರತಿ ಎಕರೆಗೆ ತಲಾ 30 ಲಕ್ಷ ರೂ. ಪರಿಹಾರ ನಿಗದಿ ಮಾಡಲಾಗಿದೆ. ಕಟ್ಟಡಗಳಿಗೆ ಪ್ರತ್ಯೇಕ ಮಾನದಂಡಗಳಡಿ, ಪರಿಹಾರ ನಿಗದಿ ಮಾಡಲಾಗಿದೆ.

ಇನ್ನು, ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ, ಸುಮಾರು 20 ಸಾವಿರ ಪ್ರಕರಣಗಳು ನ್ಯಾಯಾಲಯದಲ್ಲಿದ್ದು, ರಾಜೀ ಸಂಧಾನ ಅಥವಾ ಕಾನೂನು ಪ್ರಕಾರ ಇತ್ಯರ್ಥ ಮಾಡಿಕೊಳ್ಳಲಾಗುತ್ತಿದೆ. ನ್ಯಾಯಾಲಯದಲ್ಲಿ ಪ್ರಕರಣವಿಲ್ಲದ ಜಮೀನುಗಳನ್ನು, ರೈತರಿಂದ ನೇರವಾಗಿ ಖರೀದಿ ಮಾಡಲಾಗುವುದು ಎಂದು, ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

About The Author