KSRTC ಚಾಲಕನೊಬ್ಬ ಡಿಪೋ ಮ್ಯಾನೇಜರ್‌ನ ಕಿರುಕುಳಕ್ಕೆ ರೋಸಿ ಹೋಗಿದ್ದಾನೆ. ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಬಸ್‌ನಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರ್ ಜಿಲ್ಲೆಯ ಡಿಪೋ ನಂ.1ರಲ್ಲಿ ನಡೆದಿದೆ. ಘೋರ ಘಟನೆಗೆ ಇಡೀ ಬೀದರ್ ಜಿಲ್ಲೆಯೇ ಬೆಚ್ಚಿ ಬಿದ್ದಿದೆ.
ಆಣದೂರು ಗ್ರಾಮದ ನಿವಾಸಿ 59 ವರ್ಷದ ರಾಜಪ್ಪ ಎಂಬುವವರು, ಬಳ್ಳಾರಿ–ಬೀದರ್ ಸ್ಲೀಪರ್ ಕೋಚ್ ಬಸ್‌ನಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು. ಆತ್ಮಹತ್ಯೆಗೆ ಮೊದಲು ಅವರು ಯಾವುದೇ ದಾಖಲೆ ಇಟ್ಟು ಹೋಗದಿದ್ದರೂ, ಕುಟುಂಬಸ್ಥರು ಮತ್ತು ಸಹೋದ್ಯೋಗಿಗಳ ಆಕ್ಷೇಪದ ಪ್ರಕಾರ, ಡಿಪೋ ಮ್ಯಾನೇಜರ್ ವಿಠಲ್ ಬೋವಿ ಅವರಿಂದ ನಿರಂತರವಾಗಿ ಕಿರುಕುಳ ಹಾಗೂ ಕೆಲಸದ ಒತ್ತಡ ಎದುರಿಸುತ್ತಿದ್ದರು ಎಂಬುದು ಬಹಿರಂಗವಾಗಿದೆ.
ವಯೋಮಾನದ ಕಾರಣದಿಂದಾಗಿ ಹಾಗೂ ಕಾಲಿಗೆ ಗಾಯವಾದ ಹಿನ್ನೆಲೆಯಲ್ಲಿ ರಾಜಪ್ಪ ಅವರು ಅನೇಕ ಬಾರಿ ರಜೆ ಅಥವಾ ದೈಹಿಕವಾಗಿ ಕಡಿಮೆ ಒತ್ತಡವಿರುವ ಕೆಲಸಕ್ಕಾಗಿ ವಿನಂತಿಸಿದ್ದರಂತೆ. ಡಿಪೋ ಅಧಿಕಾರಿಗಳು ಯಾವುದೇ ಸಹಾನುಭೂತಿ ತೋರಲಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.
ಆರು ಹೆಣ್ಣುಮಕ್ಕಳ ತಂದೆಯಾಗಿದ್ದ ರಾಜಪ್ಪ ಕುಟುಂಬದ ಏಕೈಕ ಆಧಾರವಾಗಿದ್ದರು. ನಿವೃತ್ತಿಗೆ ಇನ್ನು ಕೆಲವೇ ತಿಂಗಳುಗಳಿದ್ದರೂ, ದುರ್ಘಟನೆಯಿಂದ ಅವರ ಜೀವನ ಅಂತ್ಯ ಕಂಡಿದೆ. ಈ ಅಕಾಲಿಕ ನಷ್ಟದಿಂದ ಕುಟುಂಬ ದಿಕ್ಕೇ ತೋಚದೆ ಸಂಕಟದಲ್ಲಿದೆ.
ಈ ಘಟನೆ ಬಳಿಕ ಕುಟುಂಬಸ್ಥರು ಮತ್ತು ಸಂಬಂಧಿಕರು ಡಿಪೋ ಮ್ಯಾನೇಜರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆ ಹಾಗೂ ಪೊಲೀಸರಿಗೆ ಆಗ್ರಹಿಸಿದ್ದಾರೆ. ಸಹೋದ್ಯೋಗಿಗಳೂ ಈ ಘಟನೆಗೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.