Bengaluru: ಜಪಾನ್ ನ ಐಚಿ- ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿ ಕುಮಾರಿ ರಾಧಾ ವೆಂಕಟೇಶ್ ಅವರು ಬೆಳ್ಳಿ ಪದಕ ಪಡೆದಿದ್ದು ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಎಸ್. ಲಾಡ್ ಅವರು ರಾಧಾ ಅವರನ್ನು ಅಭಿನಂದಿಸಿದ್ದಾರೆ.
ಸೋಮವಾರ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನ ಮಹಿಳೆಯರ 1500 ಮೀಟರ್ ಟಿ 12/ಟಿ 13 ಓಟದ ಸ್ಪರ್ಧೆಯಲ್ಲಿ ಭಾರತದ ಸೌಮ್ಯಾ ಚಿನ್ನದ ಪದಕ ಗೆದ್ದರೆ, ಅದೇ ಸ್ಪರ್ಧೆಯಲ್ಲಿ ರಾಧಾ ವೆಂಕಟೇಶ್ ಬೆಳ್ಳಿ ಪದಕ ಗೆದ್ದರು.
ರಾಧಾ ಅವರು 5:30.90 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡು. ಭಾರತ 1-2 ಅಂಕಗಳಿಂದ ಈ ಸಾಧನೆ ಮಾಡಿತು. T12/T13 ಸ್ಪರ್ಧೆಯು ದೃಷ್ಟಿಹೀನ ಕ್ರೀಡಾಪಟುಗಳಿಗಾಗಿಯೇ ಇರುವುದರಿಂದರಾಧಾ ಅವರಿಗೆ ಗೋವಿಂದ್ ಸೋಲಂಕಿ ಮಾರ್ಗದರ್ಶನ ನೀಡಿದರು. T13 ಅತ್ಯಂತ ಕಡಿಮೆ ದೃಷ್ಟಿ ಹೊಂದಿರುವ ಕ್ರೀಡಾಪಟುಗಳ ಪಂದ್ಯವಾಗಿರುತ್ತದೆ.
ಸಚಿವ ಲಾಡ್ ಅವರಿಂದ ಅಭಿನಂದನೆ
ರಾಧಾ ಅವರ ಸಾಧನೆಗೆ ಅತೀವ ಖುಷಿ ವ್ಯಕ್ತಪಡಿಸಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು, ಅಭಿನಂದನೆಗಳನ್ನು ತಿಳಿಸಿದ್ದಾರೆ.
ನಮ್ಮ ಇಲಾಖೆಯ ಅಧಿಕಾರಿಯೊಬ್ಬರು ಏಷ್ಯನ್ ಗೇಮ್ಸ್ ನಲ್ಲಿ ಪದಕ ಪಡೆದು ದೇಶಕ್ಕೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಅವರು ನಮ್ಮ ಇಲಾಖೆ ಅಧಿಕಾರಿ ಎಂಬುದು ಮತ್ತೊಂದು ಖುಷಿಯ ಸಂಗತಿ ಎಂದು ಹೇಳಿದ್ದಾರೆ.
ಬೆಳ್ಳಿ ಪದಕ ಗೆದ್ದು ಅದ್ವಿತೀಯ ಸಾಧನೆ ಮಾಡಿದ ನಮ್ಮ ಕಾರ್ಮಿಕ ಇಲಾಖೆ ಅಧಿಕಾರಿ, ಹೆಮ್ಮೆಯ ಕನ್ನಡತಿ ಕುಮಾರಿ ರಾಧಾ ವೆಂಕಟೇಶ್ ಅವರಿಗೆ ಹಾರ್ದಿಕ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
ರಾಧಾ ಅವರಿಗೆ ಅಭಿನಂದಿಸಿದ್ದ ಸಚಿವರು
ಪ್ಯಾರಾ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದ ರಾಧಾ ವೆಂಕಟೇಶ್ ಅವರನ್ನು ಸಚಿವ ಸಂತೋಷ್ ಲಾಡ್ ಅವರು ಅಭಿನಂದಿಸಿದ್ದರು ಜಪಾನ್‌ಗೆ ತೆರಳುವ ಮೊದಲು ಸಚಿವರ ನಿವಾಸಕ್ಕೆ ಬಂದಿದ್ದ ರಾಧಾ ಅವರನ್ನು ಅಭಿನಂದಿಸಿದ್ದ ಸಚಿವರು ಶುಭ ಕೋರಿದ್ದರು.
ಪದಕ ಗೆದ್ದು ದೇಶ ಮತ್ತು ರಾಜ್ಯಕ್ಕೆ ಕೀರ್ತಿ ತನ್ನಿ. ನಮ್ಮ ದೇಶಕ್ಕೆ, ರಾಜ್ಯಕ್ಕೆ ಬಂಗಾರದ ಪದಕದ ಜತೆ ಮರಳಿ ಎಂದು ಸಚಿವರು ಹೇಳಿದ್ದರು. ನಿರೀಕ್ಷೆಯಂತೆಯೇ ರಾಧಾ ಅವರು ಬೆಳ್ಳಿ ಪದಕ ಪಡೆದು ಇಲಾಖೆಗೆ ಹೆಮ್ಮೆ ತಂದಿದ್ದಾರೆ.




