Kashmir: ಪಹಲ್ಗಾಮ್, ಏಪ್ರಿಲ್ 23: ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಗುರಿಯಾಗಿರಿಸಿ ನಡೆದ ಭಯೋತ್ಪಾದಕರ ದಾಳಿ ನಂತರ ಕರ್ನಾಟಕ ಸರ್ಕಾರದ ಪರವಾಗಿ ಸಂತ್ರಸ್ತ ಕನ್ನಡಿಗರ ನೆರವಿಗೆ ಪಹಲ್ಗಾಮ್ ಗೆ ಧಾವಿಸಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು, ಪ್ರವಾಸಿಗರಿಗೆ ದೂರವಾಣಿ ಕರೆ ಮಾಡಿ ರಾಜ್ಯಕ್ಕೆ ವಾಪಸ್ಸಾಗಲು ಸಹಾಯ ಮಾಡುತ್ತಿದ್ದಾರೆ.
ಪಹಲ್ಗಾಮ್ ಗೆ ಬಂದಿರುವ ಲಾಡ್ ಅವರು, ಇಂದು ಬೆಳಗ್ಗೆಯಿಂದ ಸಂತ್ರಸ್ತ ಕನ್ನಡಿಗರನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ. ಮೃತ ಕನ್ನಡಿಗರ ಕುಟುಂಬ ಸದಸ್ಯರಿಗೆ ಅಗತ್ಯ ನೆರವು ಒದಗಿಸಿದ್ದಾರೆ. ಕರ್ನಾಟಕಕ್ಕೆ ಮರಳುವ ಪ್ರವಾಸಿಗರಿಗೆ ವಿಶೇಷ ವಿಮಾನದ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಪರ್ಕ ಸಂಖ್ಯೆ ಸಂಗ್ರಹಿಸಿ ಗುರುವಾರ ಹೊರಡಲಿರುವ ವಿಮಾನಕ್ಕೆ ಸಜ್ಜಾಗಿ ಎಂದು ಲಾಡ್ ಅವರೇ ತಿಳಿಸುತ್ತಿದ್ದಾರೆ.
ಎಷ್ಟು ಪ್ರವಾಸಿಗರು ಇದ್ದೀರಿ? ಎಲ್ಲಿಯವರು ಎಂಬೆಲ್ಲ ವಿವರಗಳನ್ನು ಸಚಿವರು ಕಲೆ ಹಾಕಿ ರಾಜ್ಯಕ್ಕೆ ಮರಳಲು ಕೈ ಜೋಡಿಸಿದ್ದಾರೆ. ಯಾವಾಗ ವಿಮಾನದ ಟಿಕೆಟ್ ಬುಕ್ ಮಾಡಿದ್ದೀರಿ. ಯಾವುದೇ ತೊಂದರೆ ಇಲ್ಲವೇ. ಸುರಕ್ಷಿತವಾಗಿ ಬನ್ನಿ. ನಿಮ್ಮ ನೆರವಿಗೆ ನಾವಿದ್ದೇವೆ ಎಂಬ ಭರವಸೆ ನೀಡಿದ್ದಾರೆ.