ಇಂದು ಕೊನೆಯುಸಿರೆಳೆದ ಗಾಯಕಿ, ಗಾನ ಕೋಗಿಲೆ ಲತಾ ಮಂಗೇಶ್ಕರ್ ಅಂತಿಮ ಸಂಸ್ಕಾರ ನಡೆದಿದ್ದು, ಪ್ರಧಾನಿ ಮೋದಿ ಸೇರಿ ಹಲವು ರಾಜಕೀಯ, ಸಿನಿಮಾ ರಂಗದ ಗಣ್ಯರೆಲ್ಲ ಉಪಸ್ಥಿತರಿದ್ದರು. ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಲತಾ ಮಂಗೇಶ್ಕರ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಮಹಾರಾಷ್ಟ್ರದ ರಾಜ್ಯಪಾಲರಾದ ಭಗತ್ ಸಿಂಗ್ ಕೋಶ್ಯಾರಿ, ಸಿಎಂ ಉದ್ಧವ್ ಠಾಕ್ರೆ, ಉಪ ಮುಖ್ಯಮಂತ್ರಿ ಅಜೀತ್ ಪವಾರ್, ಶಾರುಖ್ ಖಾನ್, ಜಾವೇದ್ ಅಖ್ತರ್, ಸಚಿನ್ ಟೆಂಡೂಲ್‌ಕರ್ ಸೇರಿ ಹಲವು ಗಣ್ಯರು ಮತ್ತು ಸಂಬಂಧಿಕರು ಲತಾ ದೀದಿಯ ಅಂತಿ ದರ್ಶನ ಪಡೆದರು. 1963, ಜನವರಿ 27ರಂದು, ಚೀನಾ – ಭಾರತ ಗಡಿಯಲ್ಲಿ ಯುದ್ಧ ನಡೆಯುತ್ತಿತ್ತು. ಈ ವೇಳೆ ಪ್ರಧಾನಿ ಜವಹರ್ ಲಾಲ್ ನೆಹರು ಎದುರಿಗೆ ಗಾಯಕಿ ಲತಾ ಮಂಗೇಶ್ಕರ್, ಏ ಮೇರೆ ವತನ್ ಕೆ ಲೋಗೋ ಜರಾ ಆಂಖ ಮೇ ಭರಲೋ ಪಾನಿ ಎಂದು ಹಾಡಿದ್ದರು. ಆಗ ನೆಹರು ಕಣ್ಣೀರಾಗಿದ್ದರು.
ಇಂಥ ಮಹಾನ್ ಕಲಾವಿದೆಗೆ ಒಲಿದು ಬಂದಿದ್ದು ಕೆಲ ಪ್ರಶಸ್ತಿಗಳಲ್ಲ. ಭಾರತ ರತ್ನ, ಪದ್ಮ ವಿಭೂಷಣ, ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿ, ಹಲವು ಪ್ರಶಸ್ತಿಗಳಿಗೆ ಲತಾ ದೀದಿ ಭಾಜನರಾಗಿದ್ದಾರೆ. 34ಕ್ಕೂ ಹೆಚ್ಚು ಭಾಷೆಗಳಲ್ಲಿ, ಸಾವಿರಾರು ಹಾಡುಗಳನ್ನ ಹಾಡಿದ ಖ್ಯಾತಿ ಇವರಿಗಿದೆ. ಲತಾ ಮಂಗೇಶ್ಕರ್ ಅಗಲಿಕೆ, ಭಾರತೀಯ ಚಿತ್ರರಂಗಕ್ಕೆ ದೊಡ್ಡ ನಷ್ಟವೇ ಸರಿ..