Hubli News: ಹುಬ್ಬಳ್ಳಿ: ವಿದ್ಯಾರ್ಥಿಗಳೇ ಎಚ್ಚರ..! ಪರೀಕ್ಷೆಯಲ್ಲಿ ಫೇಲ್ ಅಥವಾ ಕಡಿಮೆ ಅಂಕ ಬಂದಿದೆ ಎಂದು ಮರು ಮೌಲ್ಯಮಾಪನಕ್ಕೆ ಹಾಕಿದರೇ ಹುಷಾರ..! ಅನುತ್ತೀರ್ಣ ಒಂದು ವಿಷಯದ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದರೆ, ಉತ್ತೀರ್ಣವಾದ ಇನ್ನೊಂದು ವಿಷಯವನ್ನೂ ಅನುತ್ತೀರ್ಣ ಎಂದು ಪ್ರಕಟಿಸಿ ವಿದ್ಯಾರ್ಥಿನಿಯೊಬ್ಬಳನ್ನು ಸಂಕಷ್ಟ ಸಿಲುಕಿದ ಸಂಗತಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಿಂದ ನಡೆದಿದೆ.
ವಿದ್ಯಾರ್ಥಿನಿ ಅಂತಿಮ ವರ್ಷದ ಸೆಮಿಸ್ಟರ್ ನ ಭೂ ಕಾನೂನು (ಲ್ಯಾಂಡ್ ಲಾ) ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರು. ಆ ವಿಷಯದ ಬಗ್ಗೆ 500 ರೂ. ಶುಲ್ಕ ತುಂಬಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಭೂ ಕಾನೂನು ಪರೀಕ್ಷೆಯಲ್ಲಿ ಅನುತ್ತೀರ್ಣ ಮಾಡುವುದರ ಜತೆಗೆ ಈಗಾಗಲೇ ಪರಿಸರ ಉತ್ತೀರ್ಣಗೊಂಡಿದ್ದ ಕಾನೂನು (ಎನ್ವಿರಾಮೆಂಟ್ ಲಾ) ವಿಷಯದಲ್ಲಿಯೂ ಫೇಲ್ ಮಾಡಿ ಫಲಿತಾಂಶ ಪ್ರಕಟಿಸಿದೆ.
”ನಾನು ಕೇವಲ ಭೂ ಕಾನೂನು ವಿಷಯಕ್ಕೆ ಮಾತ್ರವೇ ರಿವ್ಯಾಲ್ಯುವೇಶನ್ ಹಾಕಿದ್ದೆ. ಆದರೆ ವಿವಿ ತನಗೆ ಸಂಬಂಧವೇ ಇಲ್ಲದ ಹಾಗೆ ಈಗಾಗಲೇ 40 ಅಂಕ ಪಡೆದು ಉತ್ತೀರ್ಣಗೊಂಡ ಪರಿಸರ ಕಾನೂನು ವಿಷಯದಲ್ಲಿ ಅನಗತ್ಯ ತಿದ್ದುಪಡಿ ಮಾಡಿ 34 ಅಂಕ ನೀಡಿ ಅನುತ್ತೀರ್ಣಗೊಳಿಸಿದೆ. ಇದರಿಂದ ಆಕಾಶವೇ ತಲೆ ಮೇಲೆ ಬಿದ್ದಂತಾಗಿದ್ದು, ಈಗ ಒಂದರ ಬದಲು 2 ವಿಷಯ ಪರೀಕ್ಷೆ ಮತ್ತೊಮ್ಮೆ ಎದುರಿಸಬೇಕಿದೆ.” ಎಂದು ನೊಂದ ವಿದ್ಯಾರ್ಥಿನಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇನ್ನೂ ವಿದ್ಯಾರ್ಥಿನಿ ಪರಿಸರ ಕಾನೂನು ವಿಷಯದ ಅಸೈನ್‌ಮೆಂಟ್ ಅಂಕ ಸಹ ರವಾನಿಸಿದ್ದರೂ ವಿವಿ ಮಾತ್ರ ಅಸೈನ್‌ಮೆಂಟ್‌ಗೆ ನೀಡುವ ಇಂಟರ್ನಲ್ ಅಂಕ ಹಾಕದೆ ಖಾಲಿ ಬಿಟ್ಟಿದೆ. ವಿವಿಯ ಈ ಎಡವಟ್ಟು ವಿದ್ಯಾರ್ಥಿಗಳಿಗೆ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕುವ ಯೋಚನೆಯನ್ನೇ ಮೊಟಕುಗೊಳಿಸುವಂತೆ ಮಾಡಿದೆ. ಮುಂದೆ ಭೂ ಕಾನೂನು ವಿಷಯದ ಜತೆಗೆ ಪರಿಸರ ಕಾನೂನು ವಿಷಯದ ಪರೀಕ್ಷೆ ಬರೆಯಬೇಕೇ ಎಂಬುದು ವಿದ್ಯಾರ್ಥಿನಿ ಗೊಂದಲಕ್ಕೆ ಸಿಲುಕಿದ್ದಾರೆ. ಪರೀಕ್ಷಾಂಗ ವಿಭಾಗದ ಇಂತಹ ಅನೇಕ ಲೋಪಗಳಿಂದ ತೊಂದರೆಯಾಗಿದೆ. ಕೂಡಲೇ ಪರೀಕ್ಷಾ ವಿಭಾಗದ ಸುಧಾರಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು, ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ನಾನು ಕೇವಲ ಭೂ ಕಾನೂನು ವಿಷಯದಲ್ಲಿ ಅನುತ್ತೀರ್ಣಳಾಗಿದ್ದೇನೆ. ಆ ವಿಷಯಕ್ಕೆ ಮಾತ್ರ ರಿವ್ಯಾಲ್ಯೂವೇಷನ್‌ಗೆ ಅರ್ಜಿ ಸಲ್ಲಿಸಿದ್ದೆ. ಆದರೆ, ವಿವಿಯ ಪರೀಕ್ಷಾ ವಿಭಾಗದವರು ನಾನು ಈಗಾಗಲೇ ಪಾಸ್ ಆಗಿರುವ ಪರಿಸರ ಕಾನೂನು ವಿಷಯವನ್ನು ಫೇಲ್ ಎಂದು ಪ್ರಕಟಿಸಿ ಆಘಾತವನ್ನುಂಟು ಮಾಡಿದ್ದಾರೆ. ಒಂದು ಪರೀಕ್ಷೆ ಮಾತ್ರ ಬರೆಯಬೇಕಾದ ತಪ್ಪಿಗೆ ವಿವಿ ಈಗ ಎರಡು ಪರೀಕ್ಷೆ ಬರೆಯುವ ಬಿಕ್ಕಟ್ಟು ಸೃಷ್ಟಿಸಿದೆ. ಇಂಥ ತಪ್ಪುಗಳಿಂದ ವಿದ್ಯಾರ್ಥಿಗಳ ಜೀವನದ ಜತೆ ವಿವಿ ಚೆಲ್ಲಾಟವಾಡುತ್ತಿದೆ. ಕೂಡಲೇ ಆಗಿರುವ ತಪ್ಪನ್ನು ಸರಿಪಡಿಸಬೇಕು ಎಂದು ವಿದ್ಯಾರ್ಥಿನಿ ಒತ್ತಾಯಿಸಿದ್ದಾರೆ.
ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ