ರಾಜರಿಗೆ ಹೊಗಳುಭಟರಂತೆ, ಬಿಜೆಪಿಗರಿಗೆ ತೆಗಳುಭಟರು: ಚಲವಾದಿ ನಾರಾಯಣಸ್ವಾಮಿ ಬಗ್ಗೆ ಪ್ರಿಯಾಂಕ್ ವ್ಯಂಗ್ಯ

Political News: ಬಿಜೆಪಿ ನಾಯಕ ಚಲವಾದಿ ನಾರಾಯಣ ಸ್ವಾಮಿ, ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಕ್ಕೆ, ಪ್ರಿಯಾಂಕ್ ಖರ್ಗೆ ಕೂಡ ನಾರಾಯಣಸ್ವಾಮಿಗೆ ಟಾಂಗ್ ನೀಡಿದ್ದಾರೆ.

“ಸೂರ್ಯ, ಚಂದ್ರ ಮತ್ತು ಸತ್ಯ ಈ ಮೂರು ವಿಷಯಗಳನ್ನು ಯಾರೂ ಸಹ ದೀರ್ಘಕಾಲ ಮುಚ್ಚಿಡಲು ಸಾಧ್ಯವಿಲ್ಲ” ಬುದ್ಧನ ಈ ಮಾತು ಚಲವಾದಿ ನಾರಾಯಣಸ್ವಾಮಿಯವರ ವಿಷಯದಲ್ಲಿ ಹೆಚ್ಚು ಪ್ರಸ್ತುತ ಎನಿಸಿಕೊಳ್ಳುತ್ತದೆ, ನಾರಾಯಣಸ್ವಾಮಿಯವರು ನನ್ನ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದ ದಿನವೇ ಅವರ ರಾಜಕೀಯ ಜೀವನ ಅಂತ್ಯವಾಗುತ್ತದೆ, ಇದೇ ಆ ಸತ್ಯ! ಹಿಂದೆ ರಾಜಮಹಾರಾಜರು ಹೋಗಳುಭಟರನ್ನು ನೇಮಿಸಿಕೊಂಡಿರುತ್ತಿದ್ದರಂತೆ, ಈಗ ಬಿಜೆಪಿ “ತೆಗಳುಭಟ”ರನ್ನು ನೇಮಿಸಿಕೊಂಡಿದೆ, ಚಲವಾದಿ ನಾರಾಯಣಸ್ವಾಮಿಯವರು ಆ ತೆಗಳುಭಟರ ಪಡೆಯ ಅಧ್ಯಕ್ಷರಾಗಿದ್ದಾರೆ ಎಂದು ಪ್ರಿಯಾಂಕ್ ವ್ಯಂಗ್ಯವಾಡಿದ್ದಾರೆ.

ನಾರಾಯಣಸ್ವಾಮಿಯವರು ದಲಿತತ್ವವನ್ನು ಸಿಂಪಥಿ ಕಾರ್ಡ್ ಆಗಿ ಬಳಸಿಕೊಂಡರೆ, ನಾವು ದಲಿತತ್ವವನ್ನು ಸ್ವಾಭಿಮಾನವಾಗಿ, ಹೋರಾಟವಾಗಿ ಕಾಣುತ್ತೇವೆ, ಬಾಬಾ ಸಾಹೇಬರು ಇದನ್ನೇ ನಮಗೆ ಹೇಳಿಕೊಟ್ಟಿದ್ದು. ನಾನು ಶೋಷಣೆಯನ್ನು ಅನುಭವಿಸಿದ್ದೇನೆ ಎನ್ನುವ ನಾರಾಯಣಸ್ವಾಮಿಯವರು ಇಂದು ಆ ಶೋಷಣೆಗೆ ಕಾರಣವಾದ RSS ಸಿದ್ದಾಂತದವರ ಜೊತೆಯೇ ನಿಂತಿರುವುದು ಅವರ ಡೋಂಗಿತನವನ್ನು ಸಾರುತ್ತದೆ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಹಿಂದೆ ಕಾಂಗ್ರೆಸ್ ನಲ್ಲಿ “ಚಲವಾದಿ ನಾರಾಯಣಸ್ವಾಮಿ”ಯಾಗಿದ್ದವರು, ಬಿಜೆಪಿಗೆ ಹೋಗಿ “ಅವಕಾಶವಾದಿ ನಾರಾಯಣಸ್ವಾಮಿ”ಯಾಗಿ ನಮ್ಮ ನಿಂದನೆಯನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ. ನಾರಾಯಣಸ್ವಾಮಿಯವರ ಅಸ್ತಿತ್ವವು ನನ್ನ ಅಸ್ತಿತ್ವದ ಮೇಲೆ ಅವಲಂಬನೆಯಾಗಿದೆ, ನಾನು ಮುಗಿದುಹೋದರೆ ನಾರಾಯಣಸ್ವಾಮಿಯವರೂ ಮುಗಿದು ಹೋಗುತ್ತಾರೆ! ಎಂದು ಪ್ರಿಯಾಂಕ್ ವ್ಯಂಗ್ಯವಾಡಿದ್ದಾರೆ.

ಮಾನ್ಯ ನಾರಾಯಣಸ್ವಾಮಿಯವರೇ, ಕಾಂಗ್ರೆಸ್ ಪಕ್ಷ ನಿಮ್ಮನ್ನು ನಾಯಕನನ್ನಾಗಿ ಬೆಳೆಸಿದ್ದಕ್ಕಾಗಿಯೇ ನಿಮ್ಮನ್ನು ಬಿಜೆಪಿ ಕರೆದುಕೊಂಡಿದ್ದು, ನಿಮ್ಮ ಸೇವೆಗಾಗಿಯೇ ಕಾಂಗ್ರೆಸ್ ನಿಮಗೆ ಅವಕಾಶಗಳನ್ನು ನೀಡಿದ್ದು, ನಿಮ್ಮನ್ನು ರಾಷ್ಟ್ರಮಟ್ಟದ ರೈಲ್ವೆ ಬೋರ್ಡ್ ಚೆರ್ಮೆನ್ ಮಾಡಿದ್ದು, ಎರಡೆರಡು ಬಾರಿ ರಾಜ್ಯ ಮಟ್ಟದ ಬೋರ್ಡ್ ಚೆರ್ಮೆನ್ ಮಾಡಿದ್ದು, ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಿದ್ದು. ನಿಮ್ಮನ್ನು ಜೀರೋದಿಂದ ಹೀರೋ ಮಾಡಿದ್ದು ಕಾಂಗ್ರೆಸ್ ಪಕ್ಷ, ಹೀರೋ ಆದಮೇಲೆಯೇ ಬಿಜೆಪಿ ನಿಮ್ಮನ್ನು ಬಿಜೆಪಿ ಕರೆದುಕೊಂಡಿದ್ದೇ ಹೊರತು ಬಿಜೆಪಿ ನಿಮ್ಮನ್ನು ಜೀರೋದಿಂದ ಬೆಳೆಸಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹರಿಹಾಯ್ದಿದ್ದಾರೆ.

ನಾರಾಯಣಸ್ವಾಮಿಯವರೇ, ನಾನು ಮೂರು ಬಾರಿ ಜನರಿಂದ ಆಯ್ಕೆಯಾಗಿದ್ದೇನೆ ಹೊರತು ಚಡ್ಡಿ ಹೊತ್ತು ಹುದ್ದೆ ಪಡೆಯಲಿಲ್ಲ, ನಾನು ಎಲೆಕ್ಟೆಡ್ ರಾಜಕಾರಿಣಿ, ನೀವು ಸಧ್ಯಕ್ಕೆ ಸೆಲೆಕ್ಟೆಡ್ ರಾಜಕಾರಿಣಿ, ಹೆಬ್ಬಾಳ ಕ್ಷೇತ್ರದಲ್ಲಿ ಜನರಿಂದ ತಿರಸ್ಕೃತರಾಗಿದ್ದ ತಾವು ಒಮ್ಮೆಯಾದರೂ ಎಲೆಕ್ಟೆಡ್ ರಾಜಕಾರಿಣಿಯಾಗಿ, ನಂತರ ನನ್ನ ಬಗ್ಗೆ ಮಾತನಾಡುವಿರಂತೆ.

ಮಾನ್ಯ ಅವಕಾಶವಾದಿ ನಾರಾಯಣಸ್ವಾಮಿಯವರೇ, ವಂಶಪರಂಪರೆಯ ರಾಜಕೀಯದ ಫಲಾನುಭವಿಗಳಾದ ನಿಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ನಿತಿನ್ ನಬೀನ್, ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ, ಶ್ರೀ ಅರವಿಂದ್ ಬೆಲ್ಲದ್, ಶ್ರೀ ಬಿ.ವೈ ರಾಘವೇಂದ್ರ, ಶ್ರೀ ತೇಜಸ್ವಿ ಸೂರ್ಯ, ಶ್ರೀ ಬಸವರಾಜ ಬೊಮ್ಮಾಯಿ, ಶ್ರೀ ರಾಘವೇಂದ್ರ, ಶ್ರೀ ಕುಮಾರ್ ಬಂಗಾರಪ್ಪ, ಶ್ರೀ ಎಸ್.ರಘು , ಶ್ರೀ ನಿಖಿಲ್ ಕಟ್ಟಿ, ಶ್ರೀ ಪ್ರದೀಪ ಶೆಟ್ಟರ್ ಶ್ರೀ ಅವಿನಾಶ್ ಜಾಧವ್, ಶ್ರೀ ಸಪ್ತಗಿರಿ ಗೌಡ …….ಪಟ್ಟಿ ಬರೆದು ಮುಗಿಸಲಾರದಷ್ಟು ದೊಡ್ಡದಾಗುತ್ತದೆ. ಮತ್ತೊಮ್ಮೆ ಹೇಳುತ್ತೇನೆ, ನೀವು ಇವರ ಬಗ್ಗೆ ಮಾತನಾಡಿ ನಿಜವಾದ ದಲಿತತ್ವದ ಸ್ವಾಭಿಮಾನವನ್ನು ನಿರೂಪಿಸಿ ಎಂದುಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ಅಂದಹಾಗೆ, ನಿಮ್ಮ ರಾಜೀನಾಮೆ ಮತ್ತು ರಾಜಕೀಯ ನಿವೃತ್ತಿಯ ಪ್ರತಿಜ್ಞೆಯೊಂದು ಕಾರ್ಯಗತವಾಗದೆ ಉಳಿದುಕೊಂಡಿದೆ, ಆಡಿದ ಮಾತನ್ನು ಉಳಿಸಿಕೊಳ್ಳುವುದೇ ನಿಜವಾದ ದಲಿತತ್ವ, ರಾಜೀನಾಮೆ ಕೊಟ್ಟು ನಿಮ್ಮ ದಲಿತತ್ವವನ್ನು ಉಳಿಸಿಕೊಳ್ಳುವುದು ಯಾವಾಗ? ಈಗಾಗಲೇ ತುಂಬಾ ತಡವಾಗಿದೆ. ರಾಜೀನಾಮೆ ಮಾತ್ರ ಕೊಡಿ ಸಾಕು, ರಾಜಕೀಯ ನಿವೃತ್ತಿ ಘೋಷಿಸಬೇಕಿಲ್ಲ, ನನ್ನ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದರೆ ಸಾಕು ರಾಜಕೀಯ ನಿವೃತ್ತಿಯು ನಿಮಗೆ ಅನಿವಾರ್ಯವಾಗುತ್ತದೆ! ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

About The Author