Hubli Political News: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ರಾಜೀನಾಮೆ ಕುರಿತು ರಾಜಕೀಯ ವಲಯದಲ್ಲಿ ಹರಿದಾಡುತ್ತಿರುವ ಊಹಾಪೋಹಗಳಿಗೆ ಸ್ವತಃ ಹೊರಟ್ಟಿ ಸ್ಪಷ್ಟನೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೇಳಿಲ್ಲ, ಈ ಕುರಿತು ಹರಿದಾಡುತ್ತಿರುವ ಸುದ್ದಿ ಕೇವಲ ಗಾಳಿ ಸುದ್ದಿ ಎಂದು ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ತಮ್ಮ ರಾಜೀನಾಮೆ ಕುರಿತು ಮುಖ್ಯಮಂತ್ರಿ ಕರೆ ಮಾಡಿ ಮನವಿ ಮಾಡಿದ್ದಾರೆ ಎಂಬ ಸುದ್ದಿಯನ್ನು ಸ್ಪಷ್ಟವಾಗಿ ತಳ್ಳಿಹಾಕಿದರು.
ತಾವು ಆಸ್ಪತ್ರೆಯಲ್ಲಿದ್ದ ವೇಳೆ ಮುಖ್ಯಮಂತ್ರಿ ಆರೋಗ್ಯ ವಿಚಾರಿಸಲು ಕರೆ ಮಾಡಿದ್ದರು. ಆದರೆ ರಾಜೀನಾಮೆ ವಿಚಾರವನ್ನು ಅವರು ಪ್ರಸ್ತಾಪಿಸಿಲ್ಲ ಎಂದು ಹೇಳಿದರು.
ಪರಿಷತ್‌ನಲ್ಲಿ ಕೆಲವರಿಗೆ ಸಭಾಪತಿ ಹುದ್ದೆಯ ಮೇಲೆ ಆಸಕ್ತಿ ಇರಬಹುದು. ಅವರು ಬಹುಮತದ ವಿಚಾರವನ್ನು ಮುಖ್ಯಮಂತ್ರಿ ಮುಂದೆ ಪ್ರಸ್ತಾಪಿಸಿರಬಹುದು. ಆದರೆ ನೇರವಾಗಿ ಯಾರೂ ತಮ್ಮ ಬಳಿ ರಾಜೀನಾಮೆ ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜೀನಾಮೆ ಕೇಳಿದರೆ ತಕ್ಷಣವೇ ನೀಡುತ್ತೇನೆ. ಕುರ್ಚಿಗೆ ಅಂಟಿಕೊಂಡು ಕುಳಿತುಕೊಳ್ಳುವ ವ್ಯಕ್ತಿ ನಾನು ಅಲ್ಲ. ಆದರೆ ಸಭಾಪತಿಯನ್ನು ಬದಲಾಯಿಸಲು ಸೂಕ್ತ ಕಾರಣ ಹಾಗೂ ಸಂವಿಧಾನಾತ್ಮಕ ಪ್ರಕ್ರಿಯೆ ಇರಬೇಕು ಎಂದು ಹೇಳಿದರು.
1956ರಿಂದಲೂ ಸರ್ಕಾರ ಬದಲಾದಾಗಲೆಲ್ಲ ಸಭಾಪತಿ ಬದಲಾವಣೆಯ ಸಂಪ್ರದಾಯ ಇರಲಿಲ್ಲ. ನನ್ನ ಅವಧಿ ಜುಲೈ 2028ರವರೆಗೆ ಇದೆ. ಸಭಾಪತಿ ವಿರುದ್ಧ ಅವಿಶ್ವಾಸ ಮಂಡಿಸಿರುವ ಉದಾಹರಣೆಗಳೂ ಇಲ್ಲ ಎಂದು ಹೇಳಿದರು.
ಸಭಾಪತಿ ಸ್ಥಾನಕ್ಕಾಗಿ ಕೆಲವರು ಕಿರಿಕಿರಿ ಮಾಡುತ್ತಿದ್ದಾರೆ. ಅವರೇ ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ ನಾನು ಪಕ್ಷಾತೀತವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಹೊರಟ್ಟಿ ತಿಳಿಸಿದರು.




