ಮದ್ದೂರು ಕಲ್ಲು ತೂರಾಟದ ಆರೋಪಿಗಳು, ಕಿಂಗ್‌ಪಿನ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಪಕ್ಕಾ ಪ್ರೀ ಪ್ಲಾನ್ ಮಾಡಿಕೊಂಡೇ, ಉದ್ದೇಶಪೂರ್ವಕವಾಗಿ ಕಲ್ಲು ತೂರಾಟ ಮಾಡಲಾಗಿದೆ ಎನ್ನಲಾಗಿದೆ. ಐದಾರು ಮಂದಿ ಅನ್ಯಕೋಮಿನ ಯುವಕರಿಂದಲೇ ಕಲ್ಲು ತೂರಾಟ ಮಾಡಿರುವುದು, ತನಿಖೆಯಲ್ಲಿ ಗೊತ್ತಾಗಿದೆ. ಇದಕ್ಕೆಲ್ಲಾ ಮೂಲ ಕಾರಣವೇ ಜಾಫರ್, ಇರ್ಫಾನ್. ಜಾಫರ್ ಮಾತುಗಳಿಂದ ಪ್ರಚೋದನೆಗೊಂಡಿದ್ದ ಇರ್ಫಾನ್, ಕಲ್ಲು ತೂರಾಟಕ್ಕೆ ಸಂಚು ರೂಪಿಸಿದ್ದ ಎನ್ನಲಾಗಿದೆ.
ಚನ್ನಪಟ್ಟಣ ಮೂಲದ ಇರ್ಫಾನ್, ಹಲವು ವರ್ಷಗಳಿಂದ ಮದ್ದೂರಲ್ಲಿ ವಾಸವಾಗಿದ್ದ. ಜಾಫರ್, ಇರ್ಫಾನ್ ಟೀಂ ಸೇರಿಕೊಂಡು ಮಸೀದಿ ಎದುರು ಗಣೇಶನ ಮೂರ್ತಿ ಮೆರವಣಿಗೆ ಸಹಿಸಲಾಗದೆ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಮೆರವಣಿಗೆ ಮಸೀದಿ ದಾಟಿ 50 ಮೀಟರ್ ಮುಂದೆ ಹೋಗುತ್ತಿದ್ದಂತೆ, ಮಸೀದಿ ಪಕ್ಕ ಮತ್ತು ಹಿಂಭಾಗ ನಿಂತುಕೊಂಡು ಕಲ್ಲು ತೂರಿದ್ದಾರೆ.
ಕಲ್ಲುಗಳು ಗಣೇಶನ ಮೂರ್ತಿ ಕೂರಿಸಿದ್ದ ಟ್ರ್ಯಾಕ್ಟರ್‌ಗೆ ಬಂದು ಬಡಿದಿವೆ. ಡಿಜೆ ಸದ್ದಿಗೆ ಡ್ಯಾನ್ಸ್ ಮಾಡಿಕೊಂಡು ಹೋಗುತ್ತಿದ್ದ ಯುವಕರು, ಇದ್ರಿಂದ ಕೆರಳಿ ಕೆಂಡವಾಗಿದ್ರು. ಮಸೀದಿಯಿಂದಲೇ ಕಲ್ಲು ತೂರಲಾಗಿದೆ ಅಂತಾ ಭಾವಿಸಿ, ಪ್ರತಿಯಾಗಿ ಕಲ್ಲು ತೂರಾಟ ಮಾಡಿದ್ದಾರೆ. ಗಲಭೆ ಶುರುವಾಗುತ್ತಿದ್ದಂತೆ, ಆರೋಪಿಗಳೆಲ್ಲಾ ಸ್ಥಳದಿಂದಲೇ ಎಸ್ಕೇಪ್ ಆಗಿದ್ದಾರೆ.
ಸದ್ಯ, 22 ಮಂದಿ ಆರೋಪಿಗಳನ್ನು ಮಂಡ್ಯ ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಸೆಪ್ಟೆಂಬರ್ 9ರ ಮಧ್ಯಾಹ್ನ 3 ಗಂಟೆಗೆ, 2 ಕೋಮಿನ ಮುಖಂಡರ ನಡುವೆ ಶಾಂತಿ ಮಾತುಕತೆ ನಡೆಸಲಾಗ್ತಿದೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ, ಖಾಸಗಿ ಕಲ್ಯಾಣ ಮಂಪದಲ್ಲಿ ಶಾಂತಿ ಸಭೆ ಏರ್ಪಡಿಸಲಾಗಿದೆ. ಶಾಂತಿ ಸಭೆಯಲ್ಲಿ ಡಿಸಿ ಕುಮಾರ್, ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಕೂಡ ಭಾಗಿಯಾಗುತ್ತಿದ್ದಾರೆ.