ಬೆಂಗಳೂರು : ವಿಶೇಷ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಉಂಟಾಗಿರುವ ಗೊಂದಲಗಳ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆಗೆ ಕನಿಷ್ಠ ಒಂದು ತಿಂಗಳ ಕಾಲ ವಿಸ್ತರಣೆ ನೀಡಬೇಕು ಎಂದು ಸಚಿವ ಮಾಗಡಿ ಬಾಲಕೃಷ್ಣ ಆಗ್ರಹಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಐಆರ್ ಪ್ರಕ್ರಿಯೆ ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದ ಹಲವು ರಾಜ್ಯಗಳಲ್ಲಿ ಜಾರಿಯಾಗಿದೆ. ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿಯೂ ಇದೇ ರೀತಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ನಡೆದಿರುವುದಾಗಿ ತಿಳಿಸಿದರು.
ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ಸಮರ್ಪಕ ತರಬೇತಿ ನೀಡದಿರುವುದೇ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಹಲವೆಡೆ ತಾಂತ್ರಿಕ ತೊಂದರೆಗಳಿಂದ ಮಾಹಿತಿಯನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಸ್ವತಃ ಕಲಿತು ಕೆಲಸ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಅವರಿಗೆ ಸೂಕ್ತ ತರಬೇತಿ ನೀಡುವುದರ ಜೊತೆಗೆ ಎಸ್‌ಐಆರ್ ಪ್ರಕ್ರಿಯೆಗೆ ಒಂದು ತಿಂಗಳ ಕಾಲಾವಕಾಶ ವಿಸ್ತರಿಸಬೇಕು ಎಂದು ಅವರು ಒತ್ತಾಯಿಸಿದರು.
ಸಾರ್ವಜನಿಕರು ಯಾವುದೇ ತೊಂದರೆಯಿಲ್ಲದೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸುವುದು ಚುನಾವಣಾ ಆಯೋಗದ ಜವಾಬ್ದಾರಿಯಾಗಿದೆ ಎಂದು ಸಚಿವರು ಹೇಳಿದರು.
ಬಿಡದಿ ಟೌನ್‌ಶಿಪ್ ಪಾದಯಾತ್ರೆ ಕುರಿತು ಟೀಕೆ
ಬಿಡದಿ ಟೌನ್‌ಶಿಪ್ ವಿಚಾರವಾಗಿ ಬಿಜೆಪಿ ನಾಯಕರು ನಡೆಸಲು ಉದ್ದೇಶಿಸಿರುವ ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿದ ಸಚಿವ ಮಾಗಡಿ ಬಾಲಕೃಷ್ಣ, “ಅವರಿಗೆ ಶುಗರ್ ಹಾಗೂ ಬಿಪಿ ಸಮಸ್ಯೆ ಇದ್ದರೆ ವಾಕಿಂಗ್ ಮಾಡಲಿ. ನಮ್ಮ ಅಶೋಕ್ ಅಣ್ಣ, ನಿಖಿಲ್ ಅಣ್ಣ ಕೂಡ ವಾಕಿಂಗ್ ಮಾಡಲಿ. ನಾನೇ ಜಾರಿಗೆ ತಂದ ಯೋಜನೆ ವಿರುದ್ಧ ನಾನೇ ಪಾದಯಾತ್ರೆ ಮಾಡುತ್ತೇನೆ ಎನ್ನುವುದು ವಿಚಿತ್ರ. ಅವರಿಗೆ ಶುಭ ಹಾರೈಸುತ್ತೇನೆ. ವಾಕಿಂಗ್ ಮಾಡಿ ಆರೋಗ್ಯ ಸುಧಾರಿಸಿಕೊಳ್ಳಲಿ,” ಎಂದು ವ್ಯಂಗ್ಯವಾಡಿದರು.




