ಬೀದರ್‌ನಲ್ಲಿ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಪ್ರಗತಿ ಪರಿಶೀಲನಾ ಸಭೆ ಆರಂಭವಾಗಿದೆ.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಬೀದರ್ ಮಹಾನಗರ ಪಾಲಿಕೆಯ ವಿವಿಧ ಕಾಮಗಾರಿಗಳ ಪ್ರಗತಿ ಕುರಿತು ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದಾರೆ. ನಗರಾಭಿವೃದ್ಧಿ ಸಚಿವರಾದ ಬಳಿಕ ಮೊದಲ ಬಾರಿಗೆ ಯತೀಂದ್ರ ಸಿದ್ದರಾಮಯ್ಯ ಬೀದರ್‌ಗೆ ಭೇಟಿ ನೀಡಿದ್ದು, ನಿನ್ನೆ ನಗರದ ವಿವಿಧ ಕಾಮಗಾರಿ ಸ್ಥಳಗಳಿಗೆ ತೆರಳಿ ಕಾಮಗಾರಿಗಳ ಪ್ರಗತಿಯನ್ನು ಖುದ್ದು ಪರಿಶೀಲಿಸಿದ್ದರು.
ಇದೀಗ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ನಡೆಯುತ್ತಿರುವ ಕಾಮಗಾರಿಗಳ ಸ್ಥಿತಿ, ವಿಳಂಬವಾಗಿರುವ ಕಾಮಗಾರಿಗಳು ಹಾಗೂ ಮುಂದಿನ ಹಂತದ ಕಾರ್ಯಗಳ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಸಭೆಯಲ್ಲಿ ಬೀದರ್ ಶಾಸಕ ರಹೀಂ ಖಾನ್ ಸಚಿವರಿಗೆ ಸಾಥ್ ನೀಡಿದ್ದು, ಬೀದರ್ ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್ ಸೇರಿದಂತೆ ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗಿಯಾಗಿದ್ದಾರೆ.
ನಗರದ ಅಭಿವೃದ್ಧಿ ಕಾಮಗಾರಿಗಳ ವೇಗ, ಗುಣಮಟ್ಟ ಹಾಗೂ ಪ್ರಗತಿ ಕುರಿತು ಸಭೆಯಲ್ಲಿ ಸಚಿವರು ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡುವ ಸಾಧ್ಯತೆ ಇದೆ.




