Devotional:
ಕೂರ್ಮಾವತಾರದಲ್ಲಿ ಮಹಾವಿಷ್ಣುವು ಆಮೆಯ ರೂಪದಲ್ಲಿ ಅವತರಿಸಿದನು. ಈ ಅವತಾರವು ಸತ್ಯ ಯುಗದಲ್ಲಿ ಆಯಿತು ಎಂದು ಹೇಳಲಾಗುತ್ತದೆ. ಮಹಾವಿಷ್ಣುವಿನ ದಶಾವತಾರಗಳ ಪೈಕಿ ಪ್ರತಿ ಅವತಾರದ ಹಿಂದೆಯೂ ಒಂದು ಉದ್ದೇಶವಿದೆ ಹಾಗೂ ಒಂದು ಸಂದೇಶವೂ ಇದೆ. ಲೋಕದಲ್ಲಿ ಅಧರ್ಮ ಹೆಚ್ಚಿದಾಗ ಧರ್ಮವನ್ನು ಪುನಃಸ್ಥಾಪಿಸಲು, ಭಕ್ತರನ್ನು ಹುಟ್ಟು-ಸಾವಿನ ಜೀವನ ಚಕ್ರದಿಂದ ಮುಕ್ತಗೊಳಿಸಲು, ಸುಜನರನ್ನು ರಕ್ಷಿಸಿ ದುರ್ಜನರನ್ನು ಶಮನಗೊಳಿಸಲು ಹಾಗೂ ಧರ್ಮಸಂಸ್ಥಾಪನೆಗಾಗಿ ಪರಮಾತ್ಮ ಕಾಲಕಾಲಕ್ಕೆ ಯಾವುದೋ ಒಂದು ರೂಪದಲ್ಲಿ ಭೂಮಿಗೆ ಇಳಿದು ಬರುತ್ತಾನೆ, ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿರುವ ಮಾತು ಅವತಾರದ ಉದ್ದೇಶವನ್ನು ಸೂಚಿಸುತ್ತೆ.
ಧರ್ಮ ಸಂಸ್ಥಾಪನೆಗಾಗಿ ಶ್ರೀಮನ್ನಾರಾಯಣ ತಾಳಿದ ದಶಾವತಾರಗಳ ಪೈಕಿ ಎರಡನೇ ಅವತಾರವೇ ಕೂರ್ಮಾವತಾರ. ಮಹಾವಿಷ್ಣುವಿನ ಮೊದಲನೇ ಅವತಾರವಾದ ಮತ್ಸ್ಯ ಅವತಾರದಂತೆ ಕೂರ್ಮಾವತಾರವೂ ಕೂಡ ಸತ್ಯಯುಗದಲ್ಲಿ ಸಂಭವಿಸಿತ್ತು. ಕೂರ್ಮಾವತಾರದಲ್ಲಿ ಮಹಾವಿಷ್ಣುವು ಆಮೆಯ ರೂಪದಲ್ಲಿ ಅವತರಿಸಿದ ಎಂದು ಹೇಳಲಾಗುತ್ತೆ. ಅಷ್ಟಕ್ಕೂ, ಮಹಾವಿಷ್ಣು ಆಮೆಯ ರೂಪದಲ್ಲಿ ಅವತರಿಸಿದ್ದಾದ್ರೂ ಏಕೆ..?
ದೇವತೆಗಳು ಹಾಗೂ ರಾಕ್ಷಸರು ಅಮರತ್ವಕ್ಕಾಗಿ ಅಮೃತವನ್ನು ಪಡೆಯಲು ಸಮುದ್ರಮಥನ ಮಾಡೋಕೆ ಮುಂದಾಗ್ತಾರೆ. ಸಮುದ್ರವನ್ನು ಕಡೆಯಲು ಮಂದರಾಚಲವನ್ನು ಕಡಗೋಲಾಗಿ ಮಾಡಿಕೊಳ್ಳುತ್ತಾರೆ ಹಾಗೂ ಸರ್ಪಗಳ ರಾಜ ವಾಸುಕಿಯನ್ನು ಹಗ್ಗವಾಗಿ ಮಾಡಿಕೊಳ್ಳುತ್ತಾರೆ. ದೇವತೆಗಳು ವಾಸುಕಿಯ ಬಾಲವನ್ನು ಹಾಗೂ ಅಸುರರು ವಾಸುಕಿಯ ತಲೆಯನ್ನು ಹಿಡಿದು ಕಡೆಯಲು ಆರಂಭಿಸಿದರು. ಸಮುದ್ರ ಮಥನವನ್ನು ಆರಂಭಿಸಿದಾಗ ಇದರಿಂದ ಮಂದರಾಚಲ ಬೆಟ್ಟವು ತಿರುಗತೊಡಗಿತು. ಹಾಗೂ ಬೆಟ್ಟವು ಸಾಗರದಲ್ಲಿ ಕುಸಿಯತೊಡಗಿತು. ಮಂದರ ಪರ್ವತವು ಬಹಳ ಭಾರವಿದುದ್ದರಿಂದ ಸಮುದ್ರದಲ್ಲಿ ಕುಸಿಯಲು ಆರಂಭಿಸುತ್ತದೆ. ಆಗ ಮಹಾವಿಷ್ಣುವು ಆಮೆಯ ರೂಪದಲ್ಲಿ ಅವತರಿಸಿ, ಮಂದರ ಪರ್ವತವನ್ನು ತನ್ನ ಬೆನ್ನ ಮೇಲೆ ಇಟ್ಟುಕೊಂಡು ಅದು ಕುಸಿಯದಂತೆ ನೋಡಿಕೊಳ್ತಾನೆ. ದೇವತೆಗಳು ಮತ್ತು ಅಸುರರು ಸಮುದ್ರ ಮಂಥನ ಮಾಡುವಾಗ ಕೇವಲ ಅಮೃತ ಮಾತ್ರವಲ್ಲ, ವಿಷವು ಕೂಡ ಹೊರಬರುತ್ತದೆ.
ಈ ಹಾಲಾಹಲವು ತುಂಬಾನೇ ವಿಷಕಾರಿಯಾಗಿತ್ತು ಹಾಗೂ ಸೃಷ್ಟಿಯನ್ನೇ ನಾಶಗೊಳಿಸುವಷ್ಟರ ಮಟ್ಟಿಗೆ ಶಕ್ತಿಯನ್ನು ಹೊಂದಿತ್ತು. ಹಾಲಾಹಲ ವಿಷ ಹೊರಬರುತ್ತಿದ್ದಂತೆ ಸೃಷ್ಟಿಯು ಅಲ್ಲೋಲ ಕಲ್ಲೋಲವಾಗಲು ಆರಂಭವಾಯಿತು. ಇದನ್ನು ತಡೆಯಲು ದೇವತೆಗಳು ಶಿವನ ಮೊರೆ ಹೋಗುತ್ತಾರೆ. ಆಗ ಪರಶಿವನು ವಿಷವನ್ನು ಸೇವಿಸಿ, ತನ್ನ ಗಂಟಲಲ್ಲೇ ಹಿಡಿದಿಟ್ಟುಕೊಳ್ಳುತ್ತಾನೆ. ಇದರಿಂದ ಶಿವನ ಕಂಠವು ನೀಲಿ ಬಣ್ಣಕ್ಕೆ ತಿರುಗುತ್ತದೆ ಆದ್ದರಿಂದ ಶಿವನನ್ನು ನೀಲಕಂಠನೆಂದು ಕರೆಯುತ್ತಾರೆ. ತದನಂತರ ಕ್ಷೀರಸಾಗರದಿಂದ ಅಮೃತವು ಹೊರಬರಲು ಪ್ರಾರಂಭವಾಗುತ್ತದೆ. ಆಗ ವಿಷ್ಣು ಮೋಹಿನಿ ಅವತಾರವನ್ನು ಧರಿಸಿ ದೇವರುಗಳು ಅಮೃತವನ್ನು ಸೇವಿಸುವಂತೆ ಮಾಡುತ್ತಾನೆ. ಈ ರೀತಿಯಾಗಿ ಕೂರ್ಮಾವತಾರದಲ್ಲಿ ಮಹಾವಿಷ್ಣುವು ದೇವತೆಗಳಿಗೆ ನೆರವಾಗಲು ಭಗವಾನ್ ವಿಷ್ಣು ಕೂರ್ಮಾವತಾರ ತಾಳಿದ ಎಂದು ಪುರಾಣದಲ್ಲಿ ಉಲ್ಲೇಖ, ಕೂರ್ಮಾವತಾರದಲ್ಲಿ ಆವಿರ್ಭವಿಸಿದ ಮಹಾವಿಷ್ಣುವು ತನ್ನ ಈ ಅವತಾರದಲ್ಲಿ ಉದ್ಘೋಷಿಸಿದ ಮಹಾಮಂತ್ರಗಳನ್ನು ಕೂರ್ಮ ಪುರಾಣ ಎನ್ನಲಾಗುತ್ತೆ. ಇದನ್ನು ಪ್ರಪ್ರಥಮವಾಗಿ ಕೂರ್ಮವಾತಾರಿ ಮಹಾವಿಷ್ಣುವು ನಾರದರಿಗೆ ಬೋಧಿಸಿದನು. ನಂತರ ನಾರದರು ಇದನ್ನು ನೈಮಿಷಾರಣ್ಯ ವಾಸಿಗಳಿಗೆ ಬೋಧಿಸಿದ್ರು ಎನ್ನಲಾಗುತ್ತೆ.