ಮದುವೆಯಾದ ಕೆಲವೇ ತಿಂಗಳಲ್ಲಿ ಪತ್ನಿಗೆ ಅನಾರೋಗ್ಯ, ವೈಯಕ್ತಿಕ ಜೀವನದಲ್ಲಿ ಅಶಾಂತಿ, ದಿನನಿತ್ಯದ ಪ್ರಶ್ನೆಗಳು ಹಾಗೂ ಒತ್ತಡದಿಂದ ಬೇಸತ್ತ, ಕೊನೆಗೂ ಪತ್ನಿಯನ್ನೇ ಕೊಂದಿದ್ದಾನೆ ಡಾ. ಮಹೇಂದ್ರ ರೆಡ್ಡಿ. ಪೊಲೀಸರ ಮುಂದೆ ಬಾಯ್ಬಿಟ್ಟಿರುವ ಆತನ ಹೇಳಿಕೆ ಈಗ ಹೊಸ ಆಘಾತ ಮೂಡಿಸಿದೆ. ಪತ್ನಿ ಡಾ. ಕೃತಿಕಾ ರೆಡ್ಡಿಯನ್ನು ಹತ್ಯೆ ಮಾಡಿದ ನಂತರ ತೀವ್ರ ಪಾಪಪ್ರಜ್ಞೆಯಿಂದ ಬಳಲಿದ ಆತ, ಆರು ತಿಂಗಳ ಕಾಲ ದೇವಸ್ಥಾನಗಳಿಂದ ದೇವಸ್ಥಾನಕ್ಕೆ ಸುತ್ತಾಡುತ್ತಿದ್ದನೆಂಬ ಅಚ್ಚರಿಯ ಮಾಹಿತಿ ಬೆಳಕಿಗೆ ಬಂದಿದೆ.
ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಈ ಪ್ರಕರಣದಲ್ಲಿ, ಮಹೇಂದ್ರ ರೆಡ್ಡಿ ತನಿಖೆಯ ವೇಳೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಪತ್ನಿ ಕೃತಿಕಾ ಅವರಿಗೆ ಮೊದಲಿನಿಂದಲೂ ಆರೋಗ್ಯ ಸಮಸ್ಯೆ ಇತ್ತು, ಆದರೆ ಅದನ್ನು ಮುಚ್ಚಿಟ್ಟು ಮದುವೆ ಮಾಡಿಕೊಟ್ಟರು ಎಂದು ಹೇಳಿದ್ದಾನೆ. ಮದುವೆಯಾದ ನಂತರ ದಾಂಪತ್ಯ ಜೀವನ ಅಸಾಧ್ಯವಾಗಿ ತೋರಿ, ಕೃತಿಕಾ ಪ್ರತಿಯೊಂದಕ್ಕೂ ಪ್ರಶ್ನೆ ಮಾಡುತ್ತಿದ್ದಳು. ಕೋಪ ಮತ್ತು ನಿರಾಶೆಯಿಂದ ಅವಳಿಗೆ ಐವಿ ಮೂಲಕ ಅಧಿಕ ಪ್ರಮಾಣದ ಅರಿವಳಿಕೆ ನೀಡಿ ಹತ್ಯೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.
ಹತ್ಯೆಯ ಬಳಿಕ ಆತ ತೀವ್ರ ಪಶ್ಚಾತ್ತಾಪದಲ್ಲಿ ಮುಳುಗಿದ್ದ. ನನ್ನ ತಪ್ಪಿಗೆ ಕ್ಷಮೆ ಕೇಳಬೇಕೆಂದು ಭಾವಿಸಿ ಸುಮಾರು 15ಕ್ಕೂ ಹೆಚ್ಚು ದೇವಸ್ಥಾನಗಳನ್ನು ಸುತ್ತಿದ್ದೆ ಎಂದು ಆತ ಪೊಲೀಸರ ಮುಂದೆ ಹೇಳಿದ್ದಾನೆ. ಪಾಪಪ್ರಜ್ಞೆ, ಭಯ ಮತ್ತು ಆತಂಕದಿಂದ ಮುಕ್ತಿ ಪಡೆಯಲು ದೇವರ ದೆಸೆಗೆ ಓಡಾಡುತ್ತಿದ್ದ ಆತನ ಕಥೆ, ವೈದ್ಯರ ಜಗತ್ತಿನ ಕತ್ತಲು ಮುಖವನ್ನೇ ಬಯಲಿಗೆ ತಂದಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

