Mandya: ಅಮೆರಿಕ ಅಕ್ಕಿ ಸಂಸ್ಥೆಯ 25 ನೇ ಬೆಳ್ಳಿ ಮಹೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ಹಾಗೂ ಆರೋಗ್ಯ ಜಾಗೃತಿ ಹಾಗೂ ವನ್ಯ ಜೀವಿಗಳ ಸಂರಕ್ಷಣೆ ಸಂದೇಶ ಜನರಿಗೆ ತಲುಪಿಸುವ ಉದ್ದೇಶದಿಂದ ಮಂಡ್ಯದಲ್ಲಿ ಅಕ್ಟೋಬರ್ 19 ರಂದು ವಾಕಥಾನ್ ನಡೆಸಲಾಗುತ್ತಿದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಹೇಳಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಮೆರಿಕಾ ಕನ್ನಡ ಕೂಟಗಳ ಅಗರ (ಅಕ್ಕ) ಸಂಸ್ಥೆಯವರು ಮಂಡ್ಯದಲ್ಲಿ ಆಯೋಜಿಸಲಾಗುವ ಅಕ್ಕ 5K ನಡಿಗೆ ಕಾರ್ಯಕ್ರಮದ ಕುರಿತು ರೂಪುರೇಷೆಗಳನ್ನು ಚರ್ಚಿಸಲು ಇಂದು ಜಿಲ್ಲಾಧಿಕಾರಿಗಳು ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಅಕ್ಟೋಬರ್ 19 ರಂದು ಬೆಳಿಗ್ಗೆ 7 ಗಂಟೆಗೆ ನಗರದ ಸರ್.ಎಂ.ವಿಶ್ವೇರಯ್ಯ ಕ್ರೀಡಾಂಗಣದಲ್ಲಿ ವಾಕಥಾನ್ ಗೆ ಚಾಲನೆ ನೀಡಲಾಗುವುದು. ಈ ಸಂದರ್ಭದಲ್ಲಿ ವಾಕಧಾನ್ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಸೇರಿಸುವಂತೆ ಹಾಗೂ ನೋಂದಣಿಗಾಗಿ ಮೂರು ಕೌಂಟರ್ ಗಳನ್ನು ಸ್ಥಾಪಿಸಿ ಸ್ವಯಂ ಸೇವಕರನ್ನು ನಿಯೋಜಿಸಲು ಅಗತ್ಯ ಕ್ರಮವಹಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಕ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಮೆರಿಕ ಕನ್ನಡ ಕೂಟಗಳ ಅಧ್ಯಕ್ಷ ಮಧು ರಂಗಯ್ಯ ಅವರು ಅ.19 ರಂದು ನಡೆಯುವ ವಾಕಥಾನ್ ಕಾರ್ಯಕ್ರಮಕ್ಕೆ ಆದಿ ಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜೀ ಸಾನಿಧ್ಯ ವಹಿಸುವರು. ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಉಪಸ್ಧಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚೆಲುವರಾಯಸ್ವಾಮಿ ಉದ್ಘಾಟಿಸುವರು ಹಾಗೂ ಜಿಲ್ಲೆಯ ಶಾಸಕರು ಹಾಗೂ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ತಿಳಿಸಿದರು.
ಅತಿಥಿಗಳಾಗಿ ನಟರಾದ ನೆನಪಿರಲಿ ಪ್ರೇಮ್, ನಟಿ ಅಮೃತಾ ಪ್ರೇಮ್, ನಟಿ ಸಾನ್ಯ ಅಯ್ಯರ್ ಭಾಗವಹಿಸುವರು ಎಂದು ಸಭೆಯಲ್ಲಿ ಮಾಹಿತಿ ನೀಡಿದರು.
ವಾಕಥಾನ್ ಭಾಗವಹಿಸುವವರ ನೋಂದಣಿ ಅಂದು ಅ. 19 ರಂದು ಬೆಳಿಗ್ಗೆ 6 ಗಂಟೆಗೆ ಆರಂಭವಾಗಲಿದೆ. ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ. ಆರ್. ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡೆ, ಅಪರ ಜಿಲ್ಲಾಧಿಕಾರಿ ಬಿ. ಸಿ. ಶಿವಾನಂದ ಮೂರ್ತಿ, ಅಕ್ಕ ಸಂಸ್ಥೆಯ ಬಸವರಾಜು, ಚಂದ್ರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.