Mandya News:
ಸಾರ್ವಜನಿಕರು ಈ ಬಾರಿ ವಿಶೇಷವಾಗಿ ಗೌರಿ ಮತ್ತು ಗಣೇಶ ಹಬ್ಬವನ್ನು ಆಚರಣೆ ಮಾಡಬೇಕೆಂಬ ಉದ್ದೇಶದಿಂದ ಮಂಡ್ಯ ಜಿಲ್ಲೆಯಲ್ಲಿ ಕೆಪೆಕ್ ಬೆಂಗಳೂರು,ಕೃಷಿ ಇಲಾಖೆ,ವಿಕಸನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಹಾಗೂ ಸಿದ್ದಯ್ಯನಕೊಪ್ಪಲು ರೈತ ಉತ್ಪಾದಕರ ಕಂಪನಿ.ಲಿ ಇವರುಗಳು ವಿಶೇಷವಾಗಿ ಬೆಲ್ಲ ದಿಂದ ಗೌರಿ – ಗಣೇಶ ಮೂರ್ತಿಯನ್ನು ಸಿದ್ದಪಡಿಸಿದ್ದಾರೆ
ಬೆಲ್ಲದಿಂದ ತಯಾರಿಸಿದ ಗೌರಿ ಗಣೇಶನನ್ನು ಖರೀದಿಸಿ ಹಬ್ಬವನ್ನು ಆಚರಿಸಿ ಎಂದು ಅಪರ ಜಿಲ್ಲಾಧಿಕಾರಿ ಡಾ. ಹೆಚ್.ಎಲ್. ನಾಗರಾಜು ಅವರು ತಿಳಿಸಿದರು
ಜಿಲ್ಲಾಧಿಕಾರಿಗಳ ಕಚೇರಿಯ ಮುಂಬಾಗದಲ್ಲಿ
ಬೆಲ್ಲ ದಿಂದ ಗೌರಿ – ಗಣೇಶ ಮೂರ್ತಿಗಳ ಮಾರಾಟದ ಪ್ರಚಾರ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಮಂಡ್ಯ ಜಿಲ್ಲೆಯಲ್ಲಿ ಹಾಗೂ ರಾಜ್ಯದಲ್ಲಿ ಪರಿಸರ ಸ್ನೇಹಿ ಸಾವಯವ ಬೆಲ್ಲದ ಗಣಪತಿ ಮತ್ತು ಗೌರಿಯನ್ನು ಪೂಜೆ ಮಾಡಿ ಉತ್ಸವದ ಹಬ್ಬವನ್ನು ಆಚರಣೆ ಮಾಡುವುದರಿಂದ ರೈತರು ಹೆಚ್ಚು ಬೆಲ್ಲವನ್ನು ಉತ್ಪಾದನೆ ಮಾಡಲು ಸಹಕಾರಿಯಾಗುತ್ತದೆ ಎಂದರು.
ಜನಸಾಮಾನ್ಯರು ತಮ್ಮ ಮನೆಗಳಲ್ಲಿ ಭಕ್ತಿ ಗೌರವದಿಂದ ಹಬ್ಬವನ್ನು ಆಚರಣೆ ಮಾಡಬೇಕಾದ ಸಂದರ್ಭದಲ್ಲಿ ಮನೆಯಲ್ಲಿ ಬೆಲ್ಲದ ಗೌರಿ ಗಣೇಶ ನನ್ನು ಇಟ್ಟು ಪೂಜೆ ಮಾಡಲಿ .ಆಗ ಯಾವುದೇ ಪರಿಸರಕ್ಕೆ ಹಾನಿ ಉಂಟಾಗುವುದಿಲ್ಲ ಎಂದರು.ಚಿಕ್ಕ ಬೆಲ್ಲದ ಗೌರಿ ಮತ್ತು ಗಣೇಶ ಜೋಡಿಗೆ ಸುಮಾರು 300 ರೂ ನಿಗದಿ ಮಾಡಿದ್ದಾರೆ. ಹಾಗೆಯೇ ದೊಡ್ಡ ಗೌರಿ ಮತ್ತು ಗಣೇಶ ಜೋಡಿಗೆ ಸುಮಾರು 400 ರೂಪಾಯಿಯನ್ನು ನಿಗದಿ ಮಾಡಿದ್ದಾರೆ ಎಂದರು.
ಪ್ರಧಾನ ಮಂತ್ರಿ ಕಿರು ಆಹಾರ ಸಂರಕ್ಷಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ (PMFME) ಯೋಜನೆ ಆಲೆಮನೆ ಗಾಣದ ಮಾಲೀಕರುಗಳಿಗೆ ಗಾಣ ಆಧುನಿಕರಣ ಗೊಳಿಸಿಕೊಳ್ಳಲು 15 ಲಕ್ಷಗಳ ವರೆಗೆ ಸಹಾಯಧನವನ್ನು (ಶೇ. 50ರ ಸಹಾಯಧನದಲ್ಲಿ ಅಂದರೆ ಕೇಂದ್ರ ಸರ್ಕಾರ ಶೇ.35 ಹಾಗೂ ರಾಜ್ಯ ಸರ್ಕಾರ ಶೇ.15ರ ಅನುಪಾತದಲ್ಲಿ) ಕೃಷಿ ಇಲಾಖೆ ವತಿಯಿಂದ ನೀಡಲಾಗುತ್ತಿದೆ.
ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡು ಇಂದು ಬೆಲ್ಲದ ಗೌರಿ ಗಣೇಶ ಮೂರ್ತಿಯನ್ನು ಎಫ್. ಪಿ. ಒ ಗಳು ಮಾರಾಟ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ವಿಕಸನ ಸಂಸ್ಥೆಯ ನಿರ್ದೇಶಕರಾದ ಮಹೇಶ್ ಚಂದ್ರ ಗುರು, ಸಂಯೋಜಕ ಕೆಂಪಯ್ಯ ಸೇರಿದಂತೆ ಇತರ ಉಪಸ್ಥಿತರಿದ್ದರು.