Mandya: 108ನೇ ದಿನಕ್ಕೆ ತಲುಪಿದ ಗೆಜ್ಜಲಗೆರೆ ಗ್ರಾಮಸ್ಥರು ಪ್ರತಿಭಟನೆ: ಬೆಂಬಲ ಸೂಚಿಸಿದ ಬಿಜೆಪಿ ನಾಯಕರು

Mandya News: ಮದ್ದೂರು ನಗರಸಭೆ ಸೇರ್ಪಡೆ ವಿರೋಧಿಸಿ ಗೆಜ್ಜಲಗೆರೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಡಿಸಿಎಂ ಡಾ. ಸಿ.ಎನ್.ಅಶ್ವಥ್ ನಾರಾಯಣ್ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

ಗೆಜ್ಜಲಗೆರೆ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆದಿದ್ದು, ಸ್ಥಳಕ್ಕೆ ಬಿಜೆಪಿ ನಾಯಕರು ಭೇಟಿ ನೀಡಿ, ಬೆಂಬಲ ಸೂಚಿಸಿದ್ದಾರೆ. ಕಳೆದ 108 ದಿನಗಳಿಂದ ಈ ಪ್ರತಿಭಟನೆ ನಡೆದಿದೆ.

ಇನ್ನು ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ, ಗ್ರಾಮ ಪಂಚಾಯಿತಿ ಉಳಿವಿಗೆ ಶಾಸಕರೊಟ್ಟಿಗೆ ಮಾತನಾಡುತ್ತೇವೆ. ಸಿಎಂ ಗೆ ಪತ್ರ ಬರೆಯುವುದಾಗಿ ಹೋರಾಟಗಾರರಿಗೆ ಭರವಸೆ ಕೊಟ್ಟಿದ್ದಾರೆ.

ಗೆಜ್ಜಲಗೆರೆ ತನ್ನದೇ ಆದ ಹೋರಾಟದ ಕಿಚ್ಚನ ಹೊಂದಿರುವ ಮಣ್ಣು. ನಳಗುಂದ ಹಾಗೂ ನರಗುಂದದಲ್ಲಿ ಗೋಲಿಬಾರ್ ನಲ್ಲಿ ರೈತರು ಹುತಾತ್ಮರಾದರು. ಮೊದಲು ಗೆಜ್ಜಲಗೆರೆಯಲ್ಲಿ ಗುಂಡುರಾವ್ ಸರ್ಕಾರ ಇದ್ದಾಗ ರೈತರು ಗೋಲಿಬಾರ್ ಗೆ ಬಲಿಯಾಗಿದ್ದು ಇದೇ ಮಣ್ಣಿನಲ್ಲಿ. ರೈತರನ್ನ ಎದುರಾಕಿಕೊಂಡ ಯಾವುದೇ ಸರ್ಕಾರ ಉಳಿದಿಲ್ಲ.

ನಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲನೇ ದಿನವೇ ಎಂಟನೇ ತರಗತಿಯಿಂದ ಪಿಜಿ ವರೆಗೆ ರೈತ ಮಕ್ಕಳ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನ ಘೋಷಣೆ ಮಾಡಿದ್ದೆ. ನಾನು ಕೂಡ ಹೋರಾಟದಿಂದ ಬಂದವನು. ಗ್ರಾಮ ಪಂಚಾಯಿತಿ ತನ್ನದೇ ಆದ ಅಧಿಕಾರವನ್ನು ಹೊಂದಿರುವಂಥದ್ದು. ಏಕಾಏಕಿ ನಗರಸಭೆ ಮಾಡಲು ಸಾಧ್ಯವಿಲ್ಲ. ನಾನು ಕೂಡ ಮದ್ದೂರು ಶಾಸಕರ ಬಳಿ ಮಾತನಾಡುತ್ತೇನೆ. ಜನರ ತೀರ್ಪಿನ ಮುಂದೆ ಯಾವುದೇ ತೀರ್ಪು ಇಲ್ಲ. ನಿಮ್ಮ ಹೋರಾಟ ಮುಂದುವರೆಯಲಿ ಗ್ರಾಮ ಪಂಚಾಯಿತಿಯನ್ನು ಉಳಿಸಿಕೊಳ್ಳುವ ನಿಮ್ಮ ಹೋರಾಟ ನಿರಂತರವಾಗಿರಲಿ ಎಂದು ಬೊಮ್ಮಾಯಿ ಹೇಳಿದ್ದಾರೆ.

About The Author