Mandya: ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಮಡುವಿನಕೊಡಿ ಗ್ರಾಮದಲ್ಲಿ ಆಯೋಜಿಸಿದ್ದ ಜೆಡಿಎಸ್ ಪಕ್ಷದ 25 ನೇ ವರ್ಷದ ಬೆಳ್ಳಿಹಬ್ಬದ ಮತ್ತು ಬೃಹತ್ ಸಮಾವೇಶ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಜೆಡಿಎಸ್ ಪಕ್ಷ 25 ವರ್ಷಗಳ ಕಾಲ ಬೆಳೆದು ಬಂದ ಹಾದಿ , ಮಾಜಿ ಪ್ರಧಾನಮಂತ್ರಿಗಳಾದ ಶ್ರೀ ಹೆಚ್.ಡಿ. ದೇವೇಗೌಡ ಸಾಹೇಬರು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಕುಮಾರಣ್ಣ ಅವರು ನಾಡಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿ, ಪಕ್ಷ ಸಂಘಟಿಸಲು ಶ್ರಮಿಸಿ, ಪಕ್ಷವನ್ನು ಹರಿಸಿದ, ಪ್ರೀತಿಸಿದ ಹಾಗೂ ಗೌರವಿಸಿದ ಪಕ್ಷದ ಹಿರಿಯ ನಾಯಕರಿಗೆ ಹಾಗೂ ಕಾರ್ಯಕರ್ತ ಬಂಧುಗಳಿಗೆ ಧನ್ಯವಾದಗಳನ್ನರ್ಪಿಸಿದರು.
ಅಧಿಕಾರ ಯಾರಿಗೂ ಶಾಶ್ವತವಲ್ಲ, ಭಗವಂತನ ಕೃಪೆ ಹಾಗೂ ಜನರ ಆಶೀರ್ವಾದ ಹಾಗೂ ಪ್ರೀತಿ ಶಾಶ್ವತವಾದದ್ದು, ನಾನು ಮೂರು ಬಾರಿ ಸೋತಿದ್ದರು ಎದೆಗುಂದಿಲ್ಲ, ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಸಂಪಾದಿಸಿದ್ದೇನೆ ನೀವೆಲ್ಲರೂ ನನ್ನ ಮೇಲೆಟ್ಟಿರುವ ವಿಶ್ವಾಸದಿಂದ ನನ್ನ ಜವಾಬ್ದಾರಿ ಅರಿತಿದ್ದೇನೆ. ನಾವೆಲ್ಲರೂ ಸೇರಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಪಕ್ಷ ಕಟ್ಟಲು ಶ್ರಮಿಸೋಣ ಎಂದು ಕಾರ್ಯಕರ್ತರಿಗೆ ನಿಖಿಲ್ ಕುಮಾರ್ ಕರೆ ನೀಡಿದ್ದಾರೆ.
ಜೆಡಿಎಸ್ ಪಕ್ಷವನ್ನು ಜಿಲ್ಲೆಯಿಂದಲು ಓಡಿಸಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ಹಿರಿಯ ನಾಯಕರು ನೀಡಿರುವ ಕೊಡುಗೆಗಳು ಶಾಶ್ವತವಾಗಿವೆ. ಮುಂಬರುವ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾಪಂಚಾಯಿತಿ ಚುನಾವಣೆಯಲ್ಲಿ ಕಾರ್ಯಕರ್ತರ ಗೆಲುವಿಗೆ ನಾವೆಲ್ಲರೂ ಒಂದಾಗಿ ಕೆಲಸ ಮಾಡೋಣ ಈ ಮೂಲಕ ಪಕ್ಷವನ್ನು ಜಿಲ್ಲೆಯಲ್ಲಿ ಭದ್ರವಾಗಿ ಕಟ್ಟೋಣ ಎಂದು ಸಂಕಲ್ಪ ಮಾಡಿದರು.
ಇದೇ ವೇಳೆ ನೂರಾರು ಮುಖಂಡರು ಕಾಂಗ್ರೆಸ್ ಪಕ್ಷ ತೊರೆದು, ಜೆಡಿಎಸ್ ಪಕ್ಷ ಸೇರ್ಪಡೆಗೊಂಡವರು ಅವರಿಗೆ ಪಕ್ಷದ ಬಾವುಟ ನೀಡಿ, ಆತ್ಮೀಯವಾಗಿ ಪಕ್ಷಕ್ಕೆ ಸ್ವಾಗತಿಲಾಯಿತು. ಈ ಸಂದರ್ಭದಲ್ಲಿ ಕೋರ್ ಕಮಿಟಿ ಅಧ್ಯಕ್ಷರಾದ ಶ್ರೀ ಜೆ. ಕೆ ಕೃಷ್ಣಾರೆಡ್ಡಿ ಅವರು, ಮಾಜಿ ಶಾಸಕರಾದ ಶ್ರೀ ರವೀಂದ್ರ ಶ್ರೀಕಂಠಯ್ಯ ಅವರು, ಜಿಲ್ಲಾಧ್ಯಕ್ಷರಾದ ಶ್ರೀ ಡಿ. ರಮೇಶ್ ಅವರು,ಜಿಲ್ಲಾ ಯುವ ಘಟಕ ಅಧ್ಯಕ್ಷರಾದ ಶ್ರೀ ಕಂಸಾಗರ ರವಿ ಅವರು ಸೇರಿದಂತೆ ಸ್ಥಳೀಯ ಮುಖಂಡರು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತ ಬಂಧುಗಳು, ಗ್ರಾಮದ ಗುರುಹಿರಿಯರು, ತಾಯಂದಿರರು ಉಪಸ್ಥಿತರಿದ್ದರು.




