Wednesday, December 3, 2025

Latest Posts

Mandya News: ಐತಿಹಾಸಿಕ ಕುಸ್ತಿ ಕಲೆಗೆ ಶ್ರೀರಂಗಪಟ್ಟಣ ಹೆಸರುವಾಸಿ : ಶಾಸಕ ರಮೇಶ್ ಬಂಡಿಸಿದ್ದೇಗೌಡ

- Advertisement -

Mandya: ಶ್ರೀರಂಗಪಟ್ಟಣ: ಐತಿಹಾಸಿಕ ಕುಸ್ತಿ ಕಲೆಗೆ ಶ್ರೀರಂಗಪಟ್ಟಣ ರಾಜ್ಯದಲ್ಲಿ ಹೆಸರುಗಳಿಸಿದ್ದು, ಮೈಸೂರು ಭಾಗದ ನೆಲದಲ್ಲಿ ಹೆಚ್ಚಿನ ಕುಸ್ತಿ ಪಟುಗಳು ವಿಶೇಷವಾಗಿ ಬೆಳೆದಿದ್ದಾರೆ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.

ಪಟ್ಟಣದ ಮೂಡಲ ಬಾಗಿಲು ಆಂಜನೇಯ ಸ್ವಾಮಿ ಕುಸ್ತಿ ಬಳಗದ ವತಿಯಿಂದ ಹನುಮ ಜಯಂತಿ ಹಾಗೂ ಹನುಮಮಾಲಾಧಾರಿಗಳ ಸಂಕೀರ್ತನಾ ಯಾತ್ರೆಯ ಅಂಗವಾಗಿ ಶ್ರೀರಂಗನಾಥ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಪುರುಷರು ಹಾಗೂ ಮಹಿಳೆಯರ ವಿಭಾಗೀಯ ಮಟ್ಟದ ಮ್ಯಾಟ್‍ ಮೇಲಿನ ಪಾಯಿಂಟ್‍ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ ಮಹರಾಜರ ಕಾಲದಿಂದಲೂ ಕುಸ್ತಿ ಕಲೆ ಹುಟ್ಟಿಕೊಂಡಿದ್ದು, ಅದರಲ್ಲೂ ಮೈಸೂರು ಭಾಗದ ಕುಸ್ತಿ ಕಲೆ ದೇಶದೆಲ್ಲಡೆ ಹೆಸರು ಮಾಡಿದೆ. ವಿಜಯನಗರ ಸಾಮ್ರಾಜ್ಯದ ನಂತರ ಶ್ರೀರಂಗಪಟ್ಟಣ ಮೈಸೂರು ರಾಜ್ಯದ ರಾಜಧಾನಿಯಾಗಿತ್ತು. ಅಂದಿನಿಂದಲೂ ಈ ಭಾಗದ ಪ್ರತೀ ಹಳ್ಳಿಗಳಲ್ಲಿ ಗರಡಿಯ ಮನೆಗಳು ಸ್ಥಾಪಿತಗೊಂಡು ಮೈಸೂರು ತನಕ ಕುಸ್ತಿ ಕಲೆ ಬೆಳೆದು ಬಂದಿದೆ.

ಶ್ರೀರಂಗಪಟ್ಟಣದಲ್ಲಿ ಇದೇ ಮೊದಲು ಇಷ್ಟು ದೊಡ್ಡ ಮಟ್ಟದಲ್ಲಿ ವಿಬಾಗೀಯ ಕುಸ್ತಿ ಪಂದ್ಯಾವಳಿಯನ್ನು ಇಲ್ಲಿನ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಆಯೋಜಿಸಿರುವುದು ಹೆಮ್ಮೆಯ ವಿಷಯವಾಗಿದೆ. ಕುಸ್ತಿ ಕಲೆಗೆ ಇನ್ನಷ್ಟು ಬೆಳೆವನಿಗೆಯ ಮೆರಗು ಬಂದಂತಾಗಿದ್ದು, ನಾಡಿನ ಕುಸ್ತಿ ಕಲೆಯನ್ನು ಅಭಿಮಾನಿಗಳು ಉಳಿಸಿ ಬೆಳೆಸಬೇಕು ಎಂದು ಅವರು ಕರೆ ನೀಡಿದರು.

ಮೂಡಲಭಾಗಿಲು ಆಂಜನೇಯ ಸ್ವಾಮಿ ಕುಸ್ತಿ ಬಳಗದ ಸದಸ್ಯರು, ಹಿಂದು ಜಾಗರಣ ವೇದಿಕೆಯ ಚಂದನ್‍ ಸೇರಿದಂತೆ ಇತರರ ಆಯೋಜನೆಯಲ್ಲಿ, ಪುರಸಭಾ ಪ್ರಭಾರ ಅಧ್ಯಕ್ಷ ಎಂ.ಎಲ್‍. ದಿನೇಶ್‍, ಹಿರಿಯ ಕುಸ್ತಿಪಟುಗಳಾದ ಪೈಲ್ವಾನ್ ಮುಕುಂದ, ಲಕ್ಷ್ಮಣ್ ಸಿಂಗ್, ಪೈಲ್ವಾನ್ ಶ್ರೀಕಂಠು, ಶ್ರೀನಿವಾಸ್‍ ಗೌಡ, ವಸ್ತಾದ್‍ ಸುರೇಶ್‍ ಸೇರಿದಂತೆ ತಾಲ್ಲೂಕಿನ ಹೆಸರಾಂತ ಕುಸ್ತಿ ಪೈಲ್ವಾನರುಗಳನ್ನು ಈ ಸಂದರ್ಭದಲ್ಲಿ ಅಭಿನಂಧಿಸಿ ಗೌರವಿಸಲಾಯಿತು.

ಕುಸ್ತಿ ಪಂದ್ಯಾವಳಿಯಲ್ಲಿ ಮಲ್ಲುಸ್ವಾಮಿ, ಬಾಲ ಸುಬ್ರಮಣ್ಯ, ಕಿರಂಗೂರು ಸುರೇಶ್, ರವಿಪ್ರಸಾದ್‍ ಸೇರಿದಂತೆ ಇತರ ಪೈಲ್ವಾನರುಗಳು ತೀರ್ಪುಗಾರರಾಗಿ ಕೆಲಸ ನಿರ್ವಹಿಸಿದರು. ಮೈಸೂರು, ಬೆಂಗಳೂರು ಸೇರಿದಂತೆ ನಾನಾ ಕಡೆಗಳಿಂದ ನೂರಾರು ವಿವಿಧ ತೂಕದ ಪೈಲ್ವಾನರುಗಳು ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಗಮನ ಸೆಳೆದರು.

ವಿಜೇತರಿಗೆ ಬಹುಮಾನದ ಜೊತೆ ನಗದು ನೀಡಲಾಗಿದ್ದು, ಸಿಪಿಐ ಬಿ.ಜಿ ಕುಮಾರ್‍ ನೇತೃತ್ವದಲ್ಲಿ ಪೊಲೀಸರು ಬಿಗಿ ಭದ್ರತೆ ಒದಗಿಸಿದರು.

ಇಂದು ನಡೆದ ವಿವಿಧ ತೂಕದಲ್ಲಿ ಪ್ರಥಮ ಸ್ಥಾನ ಪಡೆದು ವಿಜೇತ ಜೋಡಿಗಳನ್ನು ಮತ್ತೆ ನಾಳೆಯ ಡಿ. 03ರ ಬುಧವಾರ ಮಧ್ಯಾಹ್ನ ನಡೆಯುವ ಕುಸ್ತಿ ಪಂದ್ಯದಲ್ಲಿ ಆಡಿಸಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.

ಕುಸ್ತಿ ಪಂದ್ಯಾವಳಿ ವೇಳೆ ಕುಸ್ತಿ ಅಭಿಮಾನಿಗಳು ವಿಶೇಷ ಗ್ಯಾಲರಿಯಲ್ಲಿ ಕುಳಿತು ಕುಸ್ತಿ ಪಟುಗಳಿಗೆ ಶಿಳ್ಳೆ ಹೊಡೆದು ಉರಿದುಂಬಿಸುತ್ತಿದ್ದ ದೃಶ್ಯ ಕಂಡು ಬಂತು.

- Advertisement -

Latest Posts

Don't Miss