Mandya News: ಮಂಡ್ಯ : ದೇಶ ಅಭಿವೃದ್ಧಿ ಹೊಂದಲು ಮಾನವ ಸಂಪನ್ಮೂಲ ಬಹಳ ಮುಖ್ಯ, ಅದರಲ್ಲೂ ದೇಶದ ಯುವ ಜನತೆ ದೇಶದ ಶಕ್ತಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಆರ್ ನಂದಿನಿ ಅವರು ಅಭಿಪ್ರಾಯಪಟ್ಟರು.
ಅವರು ಇಂದು ಸರ್ದಾರ್ ವಲ್ಲಭಬಾಯಿ ಪಟೇಲ್ ರವರ 150 ನೇ ಜನ್ಮದಿನೋತ್ಸವದ ಪ್ರಯುಕ್ತ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಮಂಡ್ಯ ಜಿಲ್ಲಾ ಮಟ್ಟದ ಪಾದಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು .
ದೇಶದ ಯುವ ಜನತೆ ಸನ್ಮಾರ್ಗದಲ್ಲಿ ನಡೆಯದಿದ್ದರೆ ದೇಶದ ಪ್ರಗತಿ ಸಾಧ್ಯವಿಲ್ಲ. ಇಡೀ ದೇಶದ ಶಕ್ತಿಯಾಗಿರುವ ಯುವ ಜನತೆ ಸಕಾರಾತ್ಮಕ ಚಿಂತನೆಯೊಂದಿಗೆ ಉತ್ತಮ ಹಾದಿಯಲ್ಲಿ ಸಾಗಬೇಕು ಮತ್ತು ಸಮಾಜ ನಿರ್ಮಾಣಕ್ಕೆ ಸಾಕ್ಷಿಯಾಗಬೇಕು ಎಂದು ಹೇಳಿದರು.
ಸ್ವತಂತ್ರ ಪೂರ್ವದಲ್ಲಿ ದೇಶದ ಏಕತೆಗಾಗಿ ಶ್ರಮಿಸಿದ ಗಣ್ಯರಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಒಬ್ಬರು. ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಕೇವಲ ರಾಜಕೀಯ ವ್ಯಕ್ತಿಯಾಗದೆ ಸಮಾಜ ಸುಧಾರಕರಾಗಿ ಸಮಾಜಕ್ಕೆ ಅವರು ನೀಡಿರುವ ಕೊಡುಗೆ ನಿಜಕ್ಕೂ ಅಪಾರ ಎಂದು ಬಣ್ಣಿಸಿದರು.
ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ದೇಶಾಭಿಮಾನ ಮತ್ತು ದೇಶಭಕ್ತಿ ಇಂದಿನ ಯುವ ಪೀಳಿಗೆಗೆ ಸ್ಫೂರ್ತಿದಾಯಕ ಎಂದರೆ ತಪ್ಪಾಗುವುದಿಲ್ಲ. ಆಡಳಿತ ವ್ಯವಸ್ಥೆ, ರಾಜಕೀಯ ವ್ಯವಸ್ಥೆ ಹಾಗೂ ರಾಷ್ಟೀಯ ಏಕತೆಗಾಗಿ ಶ್ರಮಿಸಿರುವ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸರ್ದಾರ್ ವಲ್ಲಭಬಾಯಿ ಪಟೇಲ್ ಚಿಂತನೆ ಹಾಗೂ ಆದರ್ಶ ಕುರಿತು ವಿದ್ಯಾರ್ಥಿಗಳು ಲೇಖನಗಳನ್ನು ರಚಿಸಿ ಮತ್ತು ನಿಮ್ಮ ಸುತ್ತಮುತ್ತಲಿನ ಜನ ಸಮುದಾಯದವರಿಗೂ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ದೇಶಾಭಿಮಾನ, ಆದರ್ಶ ಕುರಿತು ತಿಳಿಸಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಉಪನಿರ್ದೇಶಕ ಓಂ ಪ್ರಕಾಶ್, ಎನ್. ಎಸ್. ಎಸ್ ಕಾರ್ಯಕ್ರಮ ಸಂಯೋಜಕರು ಹಾಗೂ ಮಂಡ್ಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಾರದ ಡಾ. ಪ್ರಮೀಳ ಎಂ. ಬಿ, ಮೂಡ ಆಯುಕ್ತರಾದ ಕೃಷ್ಣಕುಮಾರ್ ಹಾಗೂ ಪ್ರೊ. ಯೋಗಚಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

