Mandya News: ಮಂಡ್ಯ: ಕೆಲ ವರ್ಷಗಳ ಹಿಂದೆ ತಿಥಿ ಎನ್ನುವ ಸಿನಿಮಾ ಬಂದಿತ್ತು. ಅದಕ್ಕೆ ರಾಷ್ಟ್ರಪ್ರಶಸ್ತಿ ಬಂದ ಬಳಿಕವಂತೂ, ಅದು ಸಖತ್ ಫೇಮಸ್ ಆಗಿತ್ತು. ಇದಕ್ಕೆ ಕಾರಣ, ಪ್ರತಿದಿನದ ಜನಜೀವನ ಹೇಗಿರುತ್ತದೆ. ಹಳ್ಳಿ ಕಡೆ ಸಾವಾದಾಗ ಅಲ್ಲಿನ ಚಿತ್ರಣ ಹೇಗಿರುತ್ತದೆ ಅಂತಾ ಈ ಸಿನಿಮಾದಲ್ಲಿ ಹೇಳಲಾಗಿತ್ತು. ಈ ಕಾರಣಕ್ಕೆ ಜನ ಇದನ್ನು ನೆಚ್ಚಿಕ“ಂಡಿದ್ದರು.
ಆ ಸಿನಿಮಾದಲ್ಲಿ ಅಭಿನಯಿಸಿದ್ದ ಗಡ್ಡಪ್ಪ, ಸೆಂಚೂರಿ ಗೌಡ, ನಾಯಕಿ, ನಾಯಕ ಅಭಿ ಎಲ್ಲರೂ ಸಖತ್ ಫೇಮಸ್ ಆಗಿ, ಕೆಲ ಸಿನಿಮಾಗಳಲ್ಲೂ ಅವರಿಗೆ ಚಾನ್ಸ್ ಸಿಕ್ಕಿತ್ತು. ಆದರೆ ಇದೀಗ ಚಿತ್ರದ ನಾಯಕ ಅಭಿಗೆ ಎಲ್ಲೂ ಅವಕಾಶ ಸಿಗದೇ, ಆತ ಮಂಡ್ಯದಲ್ಲೇ ಕೂಲಿ ಕೆಲಸ ಮಾಡುತ್ತಿದ್ದಾನೆ.

ಮಂಡ್ಯ ತಾಲೂಕಿನ ಹುಲಿಕೆರೆ ಕೊಪ್ಪಲು ಗ್ರಾಮದವನಾಗಿರುವ ಅಭಿ, ಮರ ಕಟಾವು ಮಾಡುವ ಕೂಲಿ ಕೆಲಸ ಮಾಡುತ್ತಿದ್ದಾನೆ. ಮರ ಕುಯ್ದು ಸಾಗಿಸುವ ಕೆಲಸ ಮಾಡುತ್ತಿರುವ ಅಭಿ, ತಿಥಿ, ತರ್ಲೆ ವಿಲೇಜ್ ,ಹಳ್ಳಿ ಪಂಚಾಯ್ತಿ, ಏನ್ ನಿನ್ ಪ್ರಾಬ್ಲಮ್,ಮೈನಸ್ ತ್ರಿ ಪ್ಲಸ್ ಒನ್ ಸೇರಿದಂತೆ ಐದಾರು ಚಿತ್ರದಲ್ಲಿ ನಟಿಸಿದ್ದ. ಆದರೆ ಇದೀಗ ಸಿನಿಮಾದಲ್ಲಿ ಅವಕಾಶ ಸಿಗದೇ ಕೂಲಿ ಕೆಲಸ ಮಾಡುವಂತಾಗಿದೆ.
ಈ ಬಗ್ಗೆ ಬೇಸರದಿಂದಲೇ ಮಾತನಾಡಿರುವ ಅಭಿ, ಸಿನಿಮಾ ಜೀವನವೇ ಬೇರೆ ನೈಜ ಜೀವನವೇ ಬೇರೆ. ಅವಕಾಶ ಸಿಗದೆ ಈ ಕೆಲಸ ಮಾಡ್ತಿದ್ದು, ಅವಕಾಶ ಸಿಕ್ಕರೆ ಮತ್ತೆ ನಟನೆ ಮಾಡ್ತಿನಿ. ಈ ಶ್ರಮದ ಜೀವನದಲ್ಲಿ ಸಂತಸವಿದೆ. ಬದುಕು ಸಾಗಿಸಲು ಈ ಕೆಲಸ. ತನ್ನ ಸಂಸಾರದ ಜವಬ್ದಾರಿಗಾಗಿ ನಾನು ಈ ಕೆಲಸ ಮಾಡಲೇ ಬೇಕಾದ ಅನಿವಾರ್ಯತೆ ಇದೆ. ಮುಂದೆ ಅವಕಾಶ ಸಿಕ್ಕರೆ ನಟಿಸ್ತಿನಿ. ಇಲ್ದಿದ್ದರೆ ಇದೇ ಬದುಕಿನಲ್ಲಿ ಸಂತಸ ಪಡ್ತಿನಿ ಎಂದು ಹೇಳಿದ್ದಾನೆ ಅಭಿ.
ಒಟ್ಟಾರೆಯಾಗಿ ಸಿನಿಮಾ ಲೋಕ ಅನ್ನೋದು ಮಾಯಾ ಲೋಕದಂತೆ. ಸಿನಿಮಾ ಜತೆ ಬೇರೆ ಕೆಲಸವೂ ಇದ್ದರೆ ಉತ್ತಮ ಅಂತಾ, ಹಲವು ಕಲಾವಿದರು ಹೇಳುತ್ತಾರೆ. ಹಾಗಾಗಿ ಸಿನಿಮಾ ಮಂದಿ ಎಚ್ಚರಿಕೆಯಿಂದಲೇ ಜೀವನ ನಡೆಸಬೇಕಿರುವುದಂತೂ ಸತ್ಯ.




