Hubli News: ಹುಬ್ಬಳ್ಳಿ: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆಯಾಗಿರುವ ಘಟನೆ ನಗರದ ನಂದಗೋಕುಲ ಬಡಾವಣೆಯಲ್ಲಿ ನಡೆದಿದೆ. ಜಯಶ್ರೀ ಬಡಿಗೇರ್ (31) ಮೃತ ಗೃಹಿಣಿ.
ಕಳೆದ ಮೇ 21ರಂದು ನಂದಗೋಕುಲ ಬಡಾವಣೆ ನಿವಾಸಿ ಶಿವಾನಂದ ಎಂಬಾತನ ಜೊತೆ ಜಯಶ್ರೀ ವಿವಾಹವಾಗಿತ್ತು. ಮೃತಳ ಪತಿ ಶಿವಾನಂದ ಬಡಿಗೇರ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.. ಆದರೆ ಮದುವೆ ಮುಂಚೆ ಶಿವಾನಂದ ಬೇರೆ ಯುವತಿಯನ್ನು ಪ್ರೀತಿಸುತ್ತಿದ್ದನಂತೆ. ಹದಿಮೂರು ವರ್ಷದ ಪ್ರೀತಿ ಮುಚ್ಚಿಟ್ಟು ಜಯಶ್ರೀ ಜೊತೆಗೆ ಮದುವೆಯಾಗಿದ್ದನಂತೆ. ಮದುವೆ ನಂತರ ಜಯಶ್ರೀಗೆ ಈ ಬಗ್ಗೆ ಮಾಹಿತಿ ನೀಡಿದ್ದಾನಂತೆ. ನಂತರ ಇದೇ ವಿಚಾರಕ್ಕೆ ಪತಿ ಪತ್ನಿ ನಡುವೆ ಗಲಾಟೆ ಆಗಿತ್ತಂತೆ. ಆದ್ರು ಜಯಶ್ರೀ ಗಂಡನ ಜೊತೆ ಇರಲು ಮುಂದಾಗಿದ್ದಳಂತೆ.
ಹೀಗಾಗಿ ಜಯಶ್ರೀಗೆ ಶಿವಾನಂದ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಕಳೆದ ರಾತ್ರಿ ಕೂಡಾ ಇಬ್ಬರ ನಡುವೆ ಜಗಳವಾಗಿತ್ತಂತೆ. ರಾತ್ರಿ ಕಳೆದು ಬೆಳಗಾಗೋದರಲ್ಲಿ ಜಯಶ್ರೀ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ. ನನ್ನ ಮಗಳನ್ನು ಪತಿಯೇ ಕೊ*ಲೆ ಮಾಡಿದ್ದಾನೆ ಅಂತ ಜಯಶ್ರೀ ಹೆತ್ತವರ ಆರೋಪ ಮಾಡಿದ್ದಾರೆ.