Thursday, November 13, 2025

Latest Posts

ಮುಸ್ಲಿಂ ಮತಗಳ ಭಾರಿ ಟರ್ನೌಟ್, ನಿತೀಶ್ V/S ತೇಜಸ್ವಿ ಯಾರಿಗೆ ಮೇಲುಗೈ?

- Advertisement -

2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ದಾಖಲೆ ಮಟ್ಟದ ಮತದಾನ ದಾಖಲಾಗಿದೆ. ಮಹಿಳಾ ಮತದಾರರ ಪಾಲ್ಗೊಳ್ಳುವಿಕೆಯಲ್ಲಿ ಈ ಬಾರಿ ಇತಿಹಾಸ ನಿರ್ಮಾಣವಾಗಿದೆ. ಶೇ 71.6ರಷ್ಟು ಮಹಿಳೆಯರು ಮತ ಚಲಾಯಿಸಿದ್ದು, 2020ರಲ್ಲಿ ಈ ಸಂಖ್ಯೆ ಶೇ 59.7 ಆಗಿತ್ತು. ಅಂದರೆ ಸುಮಾರು 12 ಶೇಕಡಾ ಏರಿಕೆ ಕಂಡುಬಂದಿದೆ. ಇದಕ್ಕೆ ಹೋಲಿಸಿದರೆ ಪುರುಷ ಮತದಾರರ ಮತದಾನ ಶೇ 62.8 ಆಗಿದ್ದು, 2020ರಲ್ಲಿ ಶೇ 54.45 ಆಗಿತ್ತು.

ರಾಜ್ಯದಲ್ಲಿ ಮಹಿಳಾ ಮತದಾರರ ಪ್ರಮಾಣ ಹೆಚ್ಚಲು ಮುಖ್ಯ ಕಾರಣವಾಗಿ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮಹಿಳಾ ಪರ ಯೋಜನೆಗಳನ್ನೇ ವಿಶ್ಲೇಷಕರು ಉಲ್ಲೇಖಿಸುತ್ತಿದ್ದಾರೆ. 2005ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ನಿತೀಶ್ ಅವರು ಮಹಿಳೆಯರಿಗಾಗಿ ಹಲವು ಕ್ರಮಗಳನ್ನು ಕೈಗೊಂಡಿದ್ದರು. ಈ ಕ್ರಮಗಳಿಂದ ಜಾತಿ ತಟಸ್ಥ ಮಹಿಳಾ ಮತದಾರ ವರ್ಗ ನಿರ್ಮಾಣವಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಮತ್ತೊಂದೆಡೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ತಮ್ಮ ಪಕ್ಷ ಹಾಗೂ ಇಂಡಿಯಾ ಬಣ ಅಧಿಕಾರಕ್ಕೆ ಬಂದರೆ, ಜೀವಿಕಾ ಕಮ್ಯುನಿಟಿ ಮೊಬಿಲೈಸರ್ ಕಾರ್ಮಿಕರನ್ನು ಮಾಸಿಕ ₹30,000 ವೇತನದೊಂದಿಗೆ ಕಾಯಂ ಸರ್ಕಾರಿ ನೌಕರರನ್ನಾಗಿ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಹಾಗಾದ್ರೆ ಮುಸ್ಲಿಂ ಮತದಾರರ ನಿಲುವು ಯಾರ ಕಡೆ? ಜಮಿಯತ್ ಉಲೇಮಾ-ಎ-ಹಿಂದ್ ಬಿಹಾರ ಕಾರ್ಯದರ್ಶಿ ಡಾ. ಅನ್ವರುಲ್ ಹುದಾ ಅವರ ಪ್ರಕಾರ, ವಕ್ಫ್ ತಿದ್ದುಪಡಿ ಮಸೂದೆ ಹಾಗೂ ಸರ್ಕಾರಿ ಶಾಲೆಗಳಲ್ಲಿ ಉರ್ದು ಶಿಕ್ಷಕರ ನೇಮಕಾತಿ ಮಾಡದಿರುವುದು ಸೇರಿದಂತೆ ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನಿತೀಶ್ ಕುಮಾರ್ ಸರ್ಕಾರದ ನಿಲುವಿನಿಂದ ಅಸಮಾಧಾನ ಹೆಚ್ಚಾಗಿದೆ.

ಮುಸ್ಲಿಂ ಮತದಾರರು ಗುಂಪು ಗುಂಪಾಗಿ ಸದ್ಯದ ವ್ಯವಸ್ಥೆಯ ವಿರುದ್ಧ ಮತ ಚಲಾಯಿಸಿದ್ದಾರೆ ಎಂದು ಅವರು ಹೇಳಿದರು. ಆದರೆ ಮತ್ತೊಬ್ಬ ಮುಸ್ಲಿಂ ನಾಯಕನ ಪ್ರಕಾರ, ಸ್ಮಶಾನಗಳ ಸುತ್ತ ಗಡಿ ಗೋಡೆ ನಿರ್ಮಾಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಯಂತಹ ಕ್ರಮಗಳಿಂದ ನಿತೀಶ್ ಅವರತ್ತ ಇನ್ನೂ ಮುಸ್ಲಿಮರ ಒಂದು ಭಾಗದ ಬೆಂಬಲ ಉಳಿದಿದೆ.

ಮಹಿಳೆಯರು ಮತ್ತು ಮುಸ್ಲಿಂ ಮತದಾರರಿಂದ ದಾಖಲೆ ಮಟ್ಟದ ಮತದಾನವು ಎರಡೂ ಬಣಗಳಿಗೆ ಹೊಸ ರಾಜಕೀಯ ಲೆಕ್ಕಾಚಾರವನ್ನು ಹುಟ್ಟುಹಾಕಿದೆ. ಒಂದೆಡೆ ನಿತೀಶ್ ಕುಮಾರ್ ಅವರ ಮಹಿಳಾ ಪರ ಕ್ರಮಗಳು ಎನ್‌ಡಿಎಗೆ ಬಲ ನೀಡಬಹುದು, ಮತ್ತೊಂದೆಡೆ ಇಂಡಿಯಾ ಬಣದ ಭರವಸೆಗಳು ಹಾಗೂ ಮುಸ್ಲಿಂ ಮತದಾರರ ಅಸಮಾಧಾನವು ವಿರೋಧ ಬಣಕ್ಕೆ ಸಹಾಯ ಮಾಡಬಹುದು.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss