ಮೇಕೇದಾಟು ಯೋಜನೆ ತ್ವರಿತ ಅನುಷ್ಠಾನಕ್ಕಾಗಿ, 30 ಮಂದಿಯನ್ನು ಒಳಗೊಂಡ ತಂಡ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನವೆಂಬರ್ 18ರಂದು ನಡೆದ ಸಭೆಯಲ್ಲಿ, ಯಾವುದೇ ಅಡೆತಡೆ ಇಲ್ಲದೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅಗತ್ಯ ಕ್ರಮ ವಹಿಸುವಂತೆ ಸೂಚಿಸಲಾಗಿತ್ತು.
ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದಲ್ಲಿ ಒಂದು ಪ್ರತ್ಯೇಕ ಮುಖ್ಯ ಎಂಜಿನಿಯರ್ ಹಾಗೂ ಸಿಬ್ಬಂದಿ ಒಳಗೊಂಡ, ಹೊಸ ವಲಯ ಕಚೇರಿ ಮತ್ತು ಅಧೀಕ್ಷಕ ಎಂಜಿನಿಯರ್ ಹಾಗೂ ಸಿಬ್ಬಂದಿ ಒಳಗೊಂಡಂತೆ ಹೊಸ ವೃತ್ತ ಕಚೇರಿ ತೆರೆದು, ಕಾರ್ಯನಿರ್ವಹಿಸಲು ನಿರ್ಧಾರ ಕೈಗೊಳ್ಳಲಾಗಿತ್ತು. ಅದರಂತೆ ಕಾವೇರಿ ನೀರಾವರಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಡಿಸೆಂಬರ್ 12ರಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಹೊಸದಾಗಿ ಕಚೇರಿ ಸ್ಥಾಪಿಸಿ, ಹುದ್ದೆಗಳನ್ನು ಸೃಷ್ಟಿಸಲು ಆರ್ಥಿಕ ಇಲಾಖೆ ಅನುಮತಿ ಪಡೆಯುವುದು ಅಗತ್ಯ. ಈ ಪ್ರಕ್ರಿಯೆಗೆ ಸಮಯಾವಕಾಶ ಬೇಕಾಗಿದೆ. ಅಲ್ಲಿಯವರೆಗೆ ತಾತ್ಕಾಲಿಕವಾಗಿ ಮೊದಲ ಹಂತದಲ್ಲಿ ಮೇಕೆದಾಟು ಯೋಜನೆ ಅನುಷ್ಠಾನಗೊಳಿಸಲು, ಯೋಜನೆ ಕಾರ್ಯಭಾರವನ್ನು ಕರ್ನಾಟಕ ಎಂಜಿನಿಯರಿಂಗ್ ಸಂಶೋಧನಾ ಕೇಂದ್ರದ ನಿರ್ದೇಶಕರಿಗೆ ಹೆಚ್ಚುವರಿ ಹೊಣೆ ನೀಡಲಾಗಿದೆ.
ಕಚೇರಿ ನಿರ್ವಹಣೆ ಮತ್ತು ಮೂಲಸೌಕರ್ಯಗಳ ಹಾಗೂ ಇತರೆ ವೆಚ್ಚಗಳನ್ನು ಕಾವೇರಿ ನೀರಾವರಿ ನಿಗಮಕ್ಕೆ ಹಂಚಿಕೆ ಮಾಡಲಾದ ಅನುದಾನದಿಂದ ಭರಿಸುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ.



