ಹಾಸನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ, ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ರೂ, ಬೆಳಕಿನ ಭಾಗ್ಯವೇ ಇಲ್ಲ. ನಗರದಲ್ಲಿ ಬರೋಬ್ಬರಿ 2 ಕೋಟಿ ವೆಚ್ಚದಲ್ಲಿ, 2 ಸಾವಿರ ಎಲ್‌ಇಡಿ ಬಲ್ಬ್ ಅಳವಡಿಸಲಾಗಿತ್ತು. ನಗರೋತ್ಥಾನ ಯೋಜನೆ ಅನ್ವಯ, 2023-24ನೇ ಸಾಲಿನಲ್ಲಿ, ಬೀದಿದೀಪ ಅಳವಡಿಸಲಾಗಿತ್ತು. ಆದ್ರೀಗ ಶೇಕಡ 80ರಷ್ಟು ದೀಪಗಳು ಉರಿಯುತ್ತಲೇ ಇಲ್ಲ. ಜನರು ಕತ್ತಲೆಯಲ್ಲೇ ಇರಬೇಕಾಗಿದೆ. ಕಳಪೆ ಕೆಲಸ ಮಾಡಿದ್ರೂ ಗುತ್ತಿಗೆದಾರನಿಗೆ ಬಿಲ್ ಪಾವತಿ ಮಾಡಲಾಗಿದೆಯಂತೆ. ಇದು ಸದಸ್ಯರ ಕೆಂಗಣ್ಣಿಗೆ ಕಾರಣವಾಗಿದೆ.
ಕಷ್ಟಪಟ್ಟು ವಿಶೇಷ ಅನುದಾನ ತಂದು ವಿದ್ಯುತ್ ದೀಪ ಅಳವಡಿಸಲಾಗಿದೆ. ಆದರೆ, ಎರಡು ತಿಂಗಳು ನಿರ್ವಹಣೆ ಮಾಡಿಲ್ಲ ಹಾಗೂ ಗುಣಮಟ್ಟದಿಂದ ಕೂಡಿಲ್ಲ. ಬಲ್ಬ್ ಅಳವಡಿಸುವ ಜತೆಗೆ, 2 ವರ್ಷ ನಿರ್ವಹಣೆ ಮಾಡುವ ಷರತ್ತು ಉಲ್ಲಂಘಿಸಲಾಗಿದೆ. ಕಳಪೆ ದರ್ಜೆಯ ಬಲ್ಬ್ ಅಳವಡಿಸಿರೋದ್ರಿಂದ, ಹಣ ಪಾವತಿ ಮಾಡದಂತೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು. ಆದರೆ ಯಾರದೋ ಶಿಫಾರಸ್ಸಿಗೆ ಒಳಗಾಗಿ ಬಿಲ್ ಪಾವತಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ನಿರ್ವಹಣೆ ಮಾಡುವುದು ನಮ್ಮ ಜವಾಬ್ದಾರಿಯಲ್ಲ ಎಂದು ಗುತ್ತಿಗೆದಾರರು ವಾದಿಸುತ್ತಿದ್ದಾರೆ. ಈ ಹಿಂದಿನ ಎಂಜಿನಿಯರ್ ಮೇಲೆ ಒತ್ತಡ ತಂದು ಬಿಲ್ ಪಡೆದುಕೊಂಡಿದ್ದಾರೆ. ಗುತ್ತಿಗೆ ಪಡೆದವರು ಕೆಲಸ ಮುಗಿಸಿದ ಬಳಿಕ, ನಿರ್ವಹಣೆ ಮಾಡುವ ಷರತ್ತು ಪ್ರತಿಯೊಂದು ಟೆಂಡರ್‌ನಲ್ಲೂಇರುತ್ತದೆ. ಆದರೆ ಇಲ್ಲೇಕೆ ಆ ಷರತ್ತು ಅನ್ವಯಿಸುವುದಿಲ್ಲ. ಏನೋ ಅಕ್ರಮ ನಡೆದಿದೆ ಅಂತಾ ಆರೋಪಿಸಲಾಗಿದೆ.
ಕಳಪೆ ಗುಣಪಟ್ಟಣದ ಕೆಲಸದಿಂದಾಗಿ ಜನಸಾಮಾನ್ಯರು, ಕತ್ತಲೆಯಲ್ಲಿ ಓಡಾಡುವಂತಾಗಿದೆ. ಕಳಪೆ ಕೆಲಸಕ್ಕೆ ಈಗಾಗಲೇ ಬಿಲ್ ಪಾವತಿ ಮಾಡಿದ್ದು, ಮತ್ತೆ ಹೊಸದಾಗಿ ದೀಪ ಅಳವಡಿಸಲು ಟೆಂಡರ್ ಕರೆಯಲಾಗಿದೆ. ಸಾರ್ವಜನಿಕರು ಕಟ್ಟುವ ತೆರಿಗೆ ಹಣಕ್ಕೆ ಬೆಲೆ ಇಲ್ವಾ? ಈ ಬಗ್ಗೆ ತನಿಖೆ ನಡೆಸಬೇಕು ಅಂತಾ ಹಾಸನ ಜನರು ಆಗ್ರಹಿಸುತ್ತಿದ್ದಾರೆ.
ಇನ್ನು, ಹಾಸನ ಮಹಾನಗರ ಪಾಲಿಕೆಯ ಕುವೆಂಪು ಸಭಾಂಗಣದಲ್ಲಿ, 45 ಲಕ್ಷ ರೂ. ವೆಚ್ಚದಲ್ಲಿ ಮೈಕ್‌ಗಳನ್ನು ಅಳವಡಿಸಲಾಗಿದೆ. ಮತ್ತೆ 12 ಲಕ್ಷ ಖರ್ಚು ಮಾಡಿ ದುರಸ್ತಿಯನ್ನೂ ಮಾಡಿಸಲಾಗಿದೆ. ಆದರೂ ಸರಿಯಾಗಿ ಮೈಕ್‌ಗಳು ಕೆಲಸ ಮಾಡ್ತಿಲ್ಲ ಅಂತಾ,
ಶಾಸಕ ಸ್ವರೂಪ್ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ರು.
ಒಟ್ಟಾರೆ ವಿದ್ಯುತ್ ದೀಪ, ಮೈಕ್ ಕಳಪೆ ಸದ್ದು ಜೋರಾಗಿದೆ. ಜನತೆ ಮಾತ್ರ ಪಾಲಿಕೆ ವ್ಯವಸ್ಥೆ ವಿರುದ್ಧ ಶಪಿಸುತ್ತಾ, ರಾತ್ರಿ ವೇಳೆ ಆತಂಕದಲ್ಲೇ ಹೆಜ್ಜೆ ಇಡಬೇಕಾಗಿದೆ.

