Political News: ರಾಜ್ಯ ಸರ್ಕಾರ ಸ್ಕ್ಯಾನಿಂಗ್ ಸೇವೆ ಒದಗಿಸುತ್ತಿರುವ ಖಾಸಗಿ ಸಂಸ್ಥೆಗೆ ₹143 ಕೋಟಿ ರೂಪಾಯಿ ಬಾಕಿ ಬಿಲ್ ಪಾವತಿಸದ ಕಾರಣ ರಾಜ್ಯದ ವಿವಿಧ ಜಿಲ್ಲಾಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ ಹಾಗೂ ಎಂಆರ್ಐ ಸ್ಕ್ಯಾನಿಂಗ್ ಸೇವೆಗಳು ಸ್ಥಗಿತಗೊಂಡಿದ್ದು, ಬಡರೋಗಿಗಳು ಪರದಾಡುವ ಸ್ಥಿತಿ ಎದುರಾಗಿದೆ. ಈ ಕಾರಣಕ್ಕೆ ಆರ್.ಅಶೋಕ್ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ದಾಸ್ತಾನು ಇಲ್ಲ. ಸ್ಕ್ಯಾನಿಂಗ್ ಸೇವೆ ಒದಗಿಸುವ ಸಂಸ್ಥೆಗಳಿಗೆ ಬಾಕಿ ಬಿಲ್ ಪಾವತಿಸದ ಕಾರಣ ಸ್ಕ್ಯಾನಿಂಗ್ ಸೇವೆ ಲಭ್ಯವಿಲ್ಲ. ಹೀಗಾದರೆ ಬಡವರು, ಮಧ್ಯಮ ವರ್ಗದ ಜನರ ಪಾಡೇನು ಸ್ವಾಮಿ? ಎಂದು ಅಶೋಕ್ ಸಿಎಂ ಅವರಲ್ಲಿ ಪ್ರಶ್ನಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗುವ ಉಚಿತ/ಕಡಿಮೆ ದರದ ಆರೋಗ್ಯ ಸೇವೆಯನ್ನೇ ನಂಬಿ ಬರುವ ಬಡರೋಗಿಗಳು, ನಿಮ್ಮ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿತನದಿಂದ ಸ್ಕ್ಯಾನಿಂಗ್ ಸೇವೆ ಸಿಗದೆ ಹೋದರೆ ಹತ್ತಾರು ಸಾವಿರ ರೂಪಾಯಿ ದುಬಾರಿ ಶುಲ್ಕ ತೆತ್ತು ಖಾಸಗಿ ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿ ಹೇಗೆ ಸೇವೆ ಪಡೆಯುತ್ತಾರೆ?
ಈ ಕೂಡಲೇ ಸ್ಕ್ಯಾನಿಂಗ್ ಕಂಪನಿಗಳ ಬಾಕಿ ಬಿಲ್ ಪಾವತಿ ಮಾಡಿ ಸೇವೆ ಸ್ಥಗಿತಗೊಳ್ಳದಂತೆ ಕ್ರಮ ಕೈಗೊಳ್ಳಿ. ಆರೋಗ್ಯ ಇಲಾಖೆಯನ್ನ ಅಧೋಗತಿಗೆ ತಳ್ಳಿರುವ ಸಚಿವ ದಿನೇಶ್ ಗುಂಡೂರಾವ್ ಅವರನ್ನ ಸಂಪುಟದಿಂದ ವಜಾ ಮಾಡಿ ಯಾರಾದರೂ ಸಮರ್ಥರಿಗೆ ಆರೋಗ್ಯ ಇಲಾಖೆಯ ಜವಾಬ್ದಾರಿ ನೀಡಿ ಎಂದು ಆರ್.ಅಶೋಕ್ ಆಗ್ರಹಿಸಿದ್ದಾರೆ.




