ಬೆಂಗಳೂರು : ದೇಶದ ಚುನಾವಣಾ ವ್ಯವಸ್ಧೆಯಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ. ಅವುಗಳ ಬಗ್ಗೆ ಬೇಕಾದ ಎಲ್ಲ ಪುರಾವೆಗಳು ನಮ್ಮ ಬಳಿ ಇವೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ. ಇಡೀ ಚುನಾವಣಾ ಪ್ರಕ್ರಿಯೆಯನ್ನು ಅನುಮಾನಾಸ್ಪದವಾಗಿ ನೋಡುವಂತೆ ಸ್ಫೋಟಿಸಿರುವ ಈ ಬಾಂಬ್ ಬಗ್ಗೆ ದೇಶಾದ್ಯಂತ ತೀವ್ರ ಚರ್ಚೆ ಶುರುವಾಗಿದೆ.
ಇನ್ನೂ ಬಿಹಾರ ಮಾತ್ರವಲ್ಲ, ಮಹಾರಾಷ್ಟ್ರದಲ್ಲೂ ಈ ರೀತಿಯ ಚುನಾವಣಾ ಕಳ್ಳಾಟಗಳು ನಡೆದಿವೆ. ಅಲ್ಲದೆ ರಾಜ್ಯದ ಒಂದು ಲೋಕಸಭಾ ಕ್ಷೇತ್ರದಲ್ಲೂ ಭಾರೀ ಪ್ರಮಾಣದಲ್ಲಿ ಚುನಾವಣಾ ಅಕ್ರಮಗಳು ಆಗಿವೆ ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆ ಮುಗಿದು ಒಂದು ಕಳೆದಿದೆ. ಆದರೆ ಇಷ್ಟೊಂದು ಗಟ್ಟಿ ಧ್ವನಿಯಲ್ಲಿ ಯಾವೊಬ್ಬ ಕೈ ನಾಯಕನೂ ಚುನಾವಣಾ ಲೋಪಗಳ ಬಗ್ಗೆ ಎತ್ತಿ ತೋರಿಸಿರಲಿಲ್ಲ. ಆದರೆ ರಾಹುಲ್ ಗಾಂಧಿ ಮಾತನಾಡಲು ಪ್ರಾರಂಭಿಸಿದ ಬಳಿಕ ಇದೀಗ ಒಬ್ಬೊಬ್ಬರಾಗಿ ಕೈ ನಾಯಕರು ಬಾಯಿ ಬಿಡಲು ಮುಂದಾಗುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್ ಸಂಸದನ ಬೆನ್ನಿಗೆ ನಿಲ್ಲುತ್ತಿದ್ದಾರೆ.
ಇದನ್ನೂ ಓದಿ : ಮನೆ ಕಳ್ಳರ ಮೇಲೆ ಪೊಲೀಸ್ ಫೈರಿಂಗ್.. ಇಬ್ಬರ ಕಾಲಿಗೆ ಗುಂಡೇಟು ನೀಡಿ ಬಂಧಿಸಿದ ವಿದ್ಯಾಗಿರಿ ಪಿಎಸ್‌ಐ
ರಾಜ್ಯದಲ್ಲಿಯೂ ರಾಗಾ ಹೇಳಿಕೆಗೆ ಸಚಿವರೂ ಕೈ ಜೋಡಿಸುತ್ತಿದ್ದಾರೆ. ಇದೀಗ ಸಚಿವ ಕೆ.ಜೆ. ಜಾರ್ಜ್ ಕೂಡ ಚುನಾವಣಾ ಅಕ್ರಮಗಳ ಬಗ್ಗೆ ಧ್ವನಿ ಎತ್ತಿದ್ದಾರೆ. ಇಡೀ ದೇಶದ ಚುನಾವಣೆಯಲ್ಲಿ ಅಕ್ರಮಗಳು ನಡೆಯುತ್ತಿವೆ. ಇದನ್ನು ನಮ್ಮ ನಾಯಕ ರಾಹುಲ್ ಗಾಂಧಿ ಮಾತಾಡಿದ್ದಾರೆ. ಇದರ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಹುಲ್ ಗಾಂಧಿ ಅವರು ಕರ್ನಾಟಕ ಮಾತ್ರವಲ್ಲ, ಇಡೀ ದೇಶದಲ್ಲಿ ನಡೆಯುತ್ತಿರುವ ಅಕ್ರಮದ ಬಗ್ಗೆ ಮಾತನಾಡಿದ್ದಾರೆ. ಇಡೀ ರಾಷ್ಟ್ರದಲ್ಲಿ ಚುನಾವಣೆಗಳು ಸರಿಯಾಗಿ ನಡೆಯುತ್ತಿಲ್ಲ. ಚುನಾವಣಾ ಆಯೋಗ ಸರಿಯಾಗಿ ಕೆಲಸ ಮಾಡುತ್ತಿಲ್ಲ ಅಂತ ಆರೋಪ ಮಾಡಿದ್ದಾರೆ ಎಂದು ಜಾರ್ಜ್ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದ್ದಾರೆ.