Dharwad News: ಧಾರವಾಡ: ರೈತರು ಸೇರಿದಂತೆ ಅನೇಕ ಕುಶಲಕರ್ಮಿಗಳು, ಉದ್ಯೋಗಿಗಳು ಬ್ಯಾಂಕ್‍ಗಳಿಂದ ಸಾಲ ಸೌಲಭ್ಯ ಪಡೆಯುತ್ತಾರೆ. ಕೇಲವು ಸಂದರ್ಭಗಳಲ್ಲಿ ಅನಿವಾರ್ಯ ಕಾರಣಗಳಿಂದ ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಸಾಧ್ಯವಾಗದೆ ಸುಸ್ತಿದಾರ ಆಗುತ್ತಾರೆ. ಬ್ಯಾಂಕ್‍ಗಳು ರೈತರಿಂದ ಅಥವಾ ಸುಸ್ತಿದಾರರಿಂದ ಸಾಲ ವಸೂಲಾತಿಯಲ್ಲಿ ನೈಜ ಕಾರಣ ಪರಿಗಣಿಸಿ, ಮಾನವೀಯತೆ ತೊರಬೇಕು. ಮರುಪಾವತಿಗೆ ಕಾಲಾವಕಾಶ ನೀಡಬೇಕು. ಸಾಲ ವಸೂಲಿಗಿಂತ ಜನರ ಜೀವ ಮುಖ್ಯವಾಗಿದೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಹೇಳಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕೃಷಿ ಇಲಾಖೆ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲೆಯ ಬ್ಯಾಂಕರ್ಸ್‍ಗಳೊಂದಿಗೆ ರೈತ ಆತ್ಮಹತ್ಯೆ ಪ್ರಕರಣಗಳು ಮತ್ತು ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಸಭೆ ಜರುಗಿಸಿ, ಮಾತನಾಡಿದರು.
ಸಾಲ ವಸೂಲಾತಿಯಲ್ಲಿ ಮಾನವೀಯತೆ ಮೀರಿ ಯಾರೂ ವರ್ತಿಸಬಾರದು. ಜನರ ಜೀವ ಮುಖ್ಯ. ರೈತ ಆತ್ಮಹತ್ಯೆಗಳು ಯಾವ ಕಾರಣಕ್ಕಾಗಿ ಮತ್ತು ಯಾವ ಸಂದರ್ಭಗಳಿಂದ ಘಟಿಸುತ್ತಿವೆ ಎಂಬುವುದರ ಕುರಿತು ಅಧ್ಯಯನ ಮಾಡಲು ಕೃಷಿ ವಿಶ್ವವಿದ್ಯಾಲಯ, ಕಂದಾಯ, ಕೃಷಿ ಇಲಾಖೆ, ಬ್ಯಾಂಕ್ ಅಧಿಕಾರಿ ಹಾಗೂ ಸಾಮಾಜಿಕ ತಜ್ಞರ ಒಳಗೊಂಡ ಸಮಿತಿಯನ್ನು ರಚಿಸಲು ಕ್ರಮವಹಿಸಲಾಗುತ್ತದೆ. ಕೃಷಿ ತಜ್ಞರನ್ನು ಸಹ ಭಾಗಿ ಮಾಡಿಕೊಂಡು ವೈಜ್ಞಾನಿಕವಾಗಿ ಅಧ್ಯಯನವನ್ನು ಮಾಡಲಾಗುತ್ತದೆ. ಬ್ಯಾಂಕ್ ಅಧಿಕಾರಿಗಳು ರೈತರ ಮನೆಗಳಿಗೆ ಹೋಗಿ ಸಾಲ ಮರುಪಾವತಿಗಾಗಿ ತಿಳಿವಳಿಕೆ ನೀಡಬೇಕು. ಅವರ ಆರ್ಥಿಕ ಸ್ಥಿತಿ, ಉದ್ಯೋಗ ಬಗ್ಗೆ ತಿಳಿದು ಕಾಲಾವಕಾಶ ನೀಡಬೇಕೆಂದು ಅವರು ಹೇಳಿದರು.
ಕುಂದಗೋಳ ತಾಲೂಕಿನ ಭರದ್ವಾಡ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾದ ರೈತ ಕುಟುಂಬಗಳ ಮನೆಗಳಿಗೆ ಇಂದು ಭೇಟಿ ನೀಡಿದ್ದೇವೆ. ರೈತರ ಆತ್ಮಹತ್ಯೆಯ ಬಗ್ಗೆ ಮುಂಜಾಗ್ರತಾ ಕ್ರಮ ವಹಿಸಬೇಕು. ಧಾರವಾಡ ಜಿಲ್ಲೆಯಲ್ಲಿ ಸುಮಾರು ಐವತ್ತು ಸಾವಿರ ಅಕೌಂಟ್‍ಗಳು ಎನ್‍ಪಿ (ಕಾರ್ಯನಿರ್ವಹಿಸದ ಖಾತೆ) ಆಗಿವೆ. ಈ ಎಲ್ಲ ಎನ್.ಪಿ ಬ್ಯಾಂಕ್ ಖಾತೆಗಳನ್ನು ಎ,ಬಿ,ಸಿ ವರ್ಗ ಮಾಡಿಕೊಂಡು ಅತಿಯಾಗಿ ಯಾರು ತೊಂದರೆಯಲ್ಲಿ ಇದ್ದಾರೆ, ಅವರನ್ನು ಪತ್ತೆ ಹಚ್ಚಬೇಕು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಅವರಿಗೆ ಯೋಜನೆಗಳ ಸೌಲಭ್ಯಗಳು ಸಿಗುತ್ತಿವೆಯೋ, ಇಲ್ಲವೋ, ಎಂದು ತಿಳಿದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಅವರು ಹೇಳಿದರು.
ರೈತರ ಏಳಿಗೆಯೇ ನಮ್ಮ ಸರ್ಕಾರದ ಗುರಿ ಆಗಿದೆ. ರೈತರಿಗೆ ಸಕಾಲದಲ್ಲಿ ಬೀಜ, ಗೊಬ್ಬರ ಮತ್ತು ಕೃಷಿ ಉಪಕರಣಗಳು ಲಭ್ಯವಾಗುತ್ತಿರುವ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಕೃಷಿ ಇಲಾಖೆ ಖಾತ್ರಿಪಡಿಸಬೇಕು. ಬೆಳೆ ವಿಮೆ ಯೋಜನೆಯ ಲಾಭ ಪ್ರತಿಯೊಬ್ಬ ಅರ್ಹ ರೈತನಿಗೂ ತಲುಪಬೇಕು ಎಂದು ಹೇಳಿದರು.
ಸರ್ಕಾರದಿಂದ ಸಿಗುವ ಪಿಂಚಣಿ, ಪರಿಹಾರ, ಸಹಾಯಧನ ಮುಟ್ಟುವಂತಿಲ್ಲ
ರಾಷ್ಟ್ರೀಕೃತ ಬ್ಯಾಂಕ್, ಯಾವುದೇ ಬ್ಯಾಂಕ್ ಇದ್ದರೂ ಸಹ ಎನ್.ಪಿ ಆಗಿರುವ ಅಕೌಂಟ್‍ಗಳಿಗೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ ಸಹಾಯಧನ, ಪಿಂಚಣಿ, ಬೆಳೆ ಪರಿಹಾರ, ವಿಮೆ ಪರಿಹಾರ, ಇತರ ಸಾಲ ಸೌಲಭ್ಯಗಳಿಂದ ಯಾವುದೇ ರೀತಿ ಹಣ ಅವರ ಉಳಿತಾಯ ಖಾತೆಗೆ ಬಂದರೂ ಯಾವುದೇ ಕಾರಣಕ್ಕೂ ಬ್ಯಾಂಕ್ ನವರು ಅದನ್ನು ಸಾಲಕ್ಕೆ ಮರು ಹೊಂದಾಣಿಕೆ ಅಥವಾ ಸಾಲದ ಖಾತೆಗೆ ಜಮೆ ಪಡೆಯುವ ಅವಕಾಶವಿಲ್ಲ. ಮತ್ತು ಈ ರೀತಿ ಕ್ರಮ ವಹಿಸಲು ಬ್ಯಾಂಕ್‍ನವರಿಗೆ ಯಾವುದೇ ರೀತಿ ಕಾನೂನಿನಲ್ಲಿ ಅವಕಾಶವಿಲ್ಲ. ಇದರ ಬಗ್ಗೆ ಮಾನ್ಯ ಮುಖ್ಯಮಂತ್ರಿ ಅವರ ಜೊತೆ ಚರ್ಚೆಯನ್ನು ಸಹ ಮಾಡುತ್ತೇನೆ. ಕ್ರಾಪ್ ಲೋನ್ ಆಗಿರಲಿ, ಬೇರೆ ಯಾವುದೇ ರೀತಿಯ ಲೋನ್ ತೆಗೆದುಕೊಂಡರು ಸರ್ಕಾರದ ಸಬ್ಸಿಡಿಗೆ ಅದನ್ನು ಅಟ್ಯಾಚ್ ಮಾಡಬಾರದು ಎಂದು ಸಚಿವ ಸಂತೋಷ ಲಾಡ್ ಅವರು ಬ್ಯಾಂಕ್ ಅಧಿಕಾರಿಗಳಿಗೆ ಎಚ್ಚರಿಕೆಕೊಟ್ಟರು.
ಸಭೆಯಲ್ಲಿ ಕುಂದಗೋಳ ಶಾಸಕ ಎಂ. ಆರ್. ಪಾಟೀಲ ಹಾಗೂ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಎಂ. ಬ್ಯಾಕೋಡ್, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕೆ.ಸಿ.ಭದ್ರಣ್ಣವರ, ಲೀಡ್ ಬ್ಯಾಂಕ್ ಮ್ಯಾನೇಜರ್ ಬಸವರಾಜ ಗಡಾದ, ಎಲ್ಲ ತಾಲೂಕುಗಳ ತಹಶೀಲ್ದಾರರು, ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು, ಉಪನಿರ್ದೇಶಕರು, ಸಹಾಯಕ ಕೃಷಿ ನಿರ್ದೇಶಕರು, ಜಿಲ್ಲೆಯ ಎಲ್ಲ ಬ್ಯಾಂಕ್‍ಗಳ ಪ್ರತಿನಿಧಿಗಳು ಮತ್ತು ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಕಂದಾಯ, ಭೂದಾಖಲೆಗಳ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.