Tumakuru News: ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಕಸಬಾ ಹೋಬಳಿಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಡೆತ್ ನೋಟ್ ಬರೆದು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ತೀವ್ರ ಅಸ್ವಸ್ಥಗೊಂಡ ಬಾಲಕಿಯನ್ನು ಮೊದಲು ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಬಾಲಕಿ ಬರೆದ ಡೆತ್ ನೋಟ್‌ನಲ್ಲಿ ತನ್ನ ಆತ್ಮಹತ್ಯೆ ಯತ್ನಕ್ಕೆ ಕಾರಣವೆಂದು ಕೆಲ ವ್ಯಕ್ತಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಹೆಸರುಗಳನ್ನು ಉಲ್ಲೇಖಿಸಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. POCSO ಪ್ರಕರಣದ ಆರೋಪಿಗಳಾದ ರತ್ನಮ್ಮ, ಲೀಲಾವತಿ, ಅನಂತ, ತ್ಯಾಗರಾಜು, ಮಂಜುನಾಥ್, ಎಲ್ಲಮ್ಮ, ಮಂಜುಳಾ, ಲಿಖಿತಾ ಹಾಗೂ ಮಂಜು ಸೇರಿದಂತೆ ಹಲವರಿಂದ ತಾನು ದೈಹಿಕ ಹಾಗೂ ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದು ಬಾಲಕಿ ಪತ್ರದಲ್ಲಿ ಬರೆದಿದ್ದಾಳೆ.
ಇದಲ್ಲದೆ ಚಿಕ್ಕನಾಯಕನಹಳ್ಳಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹಾಗಿ ಕಾರ್ಯನಿರ್ವಹಿಸಿದ್ದ ಯತೀಶ್, ಪೊಲೀಸ್ ಅಧಿಕಾರಿ ವೀಣಾ ಹಾಗೂ ಬೋರಗೌಡ ಅವರ ಹೆಸರನ್ನೂ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದು, ತನ್ನ ತಂದೆ-ತಾಯಿಯ ಮೇಲೂ ಸುಳ್ಳು ಪ್ರಕರಣ ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿರುವುದಾಗಿ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಬಾಲಕಿ ಕಾಣೆಯಾದ ಸಂದರ್ಭದಲ್ಲೇ ನೀಡಿದ್ದ ದೂರುಗಳನ್ನು ಪೊಲೀಸರು ಸರಿಯಾಗಿ ಸ್ವೀಕರಿಸಿಲ್ಲ ಎಂದು ಕುಟುಂಬ ಆರೋಪಿಸಿದೆ. ಪರಿಶಿಷ್ಟ ಜಾತಿಗೆ ಸೇರಿದ ಅಲೆಮಾರಿ ಹಾಗೂ ಅನಕ್ಷರಸ್ಥ ಕುಟುಂಬವಾಗಿರುವುದನ್ನು ದುರುಪಯೋಗಪಡಿಸಿಕೊಂಡು ಆರೋಪಿಗಳಿಂದ ಹಣ ಪಡೆದು ಪೊಲೀಸರು ದೂರು ದಾಖಲಿಸದೇ ನಿರ್ಲಕ್ಷ್ಯ ವಹಿಸಿದ್ದರು ಎಂದು ಬಾಲಕಿಯ ತಾಯಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ನಂತರ ದ್ವೇಷ ಸಾಧಿಸುವ ಉದ್ದೇಶದಿಂದ ಸುಳ್ಳು POCSO ಪ್ರಕರಣ ದಾಖಲಿಸಿ, ಯಾವುದೇ ನೋಟೀಸ್ ನೀಡದೆ ಪೋಷಕರಿಗೆ ಕಿರುಕುಳ ನೀಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಬಾಲಕಿ ಡೆತ್ ನೋಟ್‌ನಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿರುವ ಹಿನ್ನೆಲೆ, ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕು ಎಂದು ಪೋಷಕರು ಹಾಗೂ ದಲಿತ ಸಂಘಟನೆಗಳು ಒತ್ತಾಯಿಸಿದ್ದಾರೆ.




