ಭೂಪಾಲ್: ಮಕ್ಕಳ ಕಳ್ಳರೆಂದು ತಪ್ಪಾಗಿ ಭಾವಿಸಿ ಮೂವರು ಕಾಂಗ್ರೆಸ್ ಮುಖಂಡರ ಮೇಲೆ ಗ್ರಾಮಸ್ಥರು ತೀವ್ರ ಹಲ್ಲೆ ನಡೆಸಿದ ಪ್ರಕರಣ ಮಧ್ಯಪ್ರದೇಶದ ಭೂಪಾಲ್ ನಲ್ಲಿ ನಡೆದಿದೆ.
ಮಧ್ಯಪ್ರದೇಶದಾದ್ಯಂತ ಮಕ್ಕಳ ಕಿಡ್ನಾಪ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಕಟ್ಟೆಚ್ಚರ ವಹಿಸಿದ್ದಾರೆ. ಅನುಮಾನಾಸ್ಪದವಾಗಿ ಓಡಾಡುವರ ಮೇಲೆ ನಿಗಾ ಇಟ್ಟಿದ್ದಾರೆ. ಮಕ್ಕಳ ಕಳ್ಳರು ವ್ಯಾನ್, ಕಾರುಗಳಲ್ಲಿ ಬರುತ್ತಾರೆಂದು ಊಹೆ ಮಾಡಿದ್ದ ಬೇತಲ್ ಜಿಲ್ಲೆಯ ನವಲ್ ಸಿನ್ಹ್ ಗ್ರಾಮಸ್ಥರು ನಿನ್ನೆ ರಾತ್ರಿ ಮುಖ್ಯರಸ್ತೆಯಲ್ಲಿ ಮರದ ದಿಮ್ಮಿಗಳನ್ನು ಅಡ್ಡಲಾಗಿಟ್ಟು ಬಂದ್ ಮಾಡಿದ್ದಾರೆ. ಆದರೆ ಅದೇ ಮಾರ್ಗವಾಗಿ ಕಾರಿನಲ್ಲಿ ಬರುತ್ತಿದ್ದ ಕಾಂಗ್ರೆಸ್ ಸ್ಥಳೀಯ ಮುಖಂಡರಾದ ಧರ್ಮೇಂದ್ರ ಶುಕ್ಲಾ, ಧರ್ಮು ಸಿಂಗ್ ಮತ್ತು ಲಲಿತ್ ಬಾರಾಸ್ಕರ್ ಎಂಬುವರು ರಸ್ತೆ ಮೇಲೆ ಹಾಕಲಾಗಿದ್ದ ಮರದ ದಿಮ್ಮಿಗಳನ್ನು ನೋಡಿ ಕಾರಿನಿಂದ ಕೆಳಕ್ಕಿಳಿದಿದ್ದಾರೆ. ಈ ವೇಳೆ ಅಲ್ಲೇ ಸಮೀಪದಲ್ಲಿ ಕಾದು ಕುಳಿತಿದ್ದ ಗ್ರಾಮಸ್ಥರು ಏಕಾಏಕಿ ಅವರನ್ನು ಬೆನ್ನಟ್ಟಿ ಹಿಡಿದು ಹಲ್ಲೆ ನಡೆಸಿದ್ದಾರೆ. ಅಲ್ಲದೆ ಕಾಂಗ್ರೆಸ್ ಮುಖಂಡರ ಕಾರನ್ನು ಜಖಂಗೊಳಿಸಿದ್ದಾರೆ.
ಈ ಕುರಿತು ಬೆತಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಇದೇ ಜಿಲ್ಲೆಯಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಹಲ್ಲೆ ಕುರಿತು ಮೂರು ಪ್ರಕರಣಗಳು ದಾಖಲಾಗಿವೆ. ಅಲ್ಲದೆ ರಾಜ್ಯಾದ್ಯಂತ ಮಕ್ಕಳ ಕಳ್ಳರ ಭೀತಿಯ ಹಿನ್ನೆಲೆಯಲ್ಲಿ ಶಂಕಿತರ ಮೇಲೆ ಉದ್ರಿಕ್ತ ಜನರು ಹಲ್ಲೆ ನಡೆಸಿರುವ ಸುಮಾರು 12ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.