2029ಕ್ಕೂ ಮುನ್ನವೇ ಸಮೀಕ್ಷೆ – ಮೋದಿ ಅಧಿಕಾರ ಉಳಿಯುತ್ತಾ?

ಲೋಕಸಭಾ ಚುನಾವಣೆ ಮುಗಿದು ಎರಡು ವರ್ಷಗಳು ಕಳೆದಿವೆ. ಮುಂದಿನ ಚುನಾವಣೆಗೆ ಇನ್ನೂ ಮೂರು ವರ್ಷಗಳ ಸುದೀರ್ಘ ಸಮಯವಿದ್ದರೂ, “ಇಂದು ಚುನಾವಣೆ ನಡೆದರೆ ದೇಶದ ರಾಜಕೀಯ ಚಿತ್ರಣ ಹೇಗಿರಲಿದೆ?” ಎಂಬ ಕುತೂಹಲ ಎಲ್ಲರಲ್ಲೂ ಸಹಜ. ಇದೀಗ ಖ್ಯಾತ ಮಾಧ್ಯಮವೊಂದು ಪ್ರಕಟಿಸಿರುವ ಇತ್ತೀಚಿನ ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆಯು ಇದಕ್ಕೆ ಸ್ಪಷ್ಟ ಉತ್ತರ ನೀಡಿದೆ.

ಹೌದು ‘ಸಮೀಕ್ಷೆಯ ವರದಿಯ ಪ್ರಕಾರ, ಒಂದು ವೇಳೆ ಇಂದು ಲೋಕಸಭಾ ಚುನಾವಣೆ ನಡೆದರೆ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಸ್ಪಷ್ಟ ಬಹುಮತದೊಂದಿಗೆ ಅಧಿಕಾರವನ್ನು ಉಳಿಸಿಕೊಳ್ಳಲಿದೆ. ಸತತ 12ನೇ ವರ್ಷವೂ ಅಧಿಕಾರದಲ್ಲಿ ಮುಂದುವರಿಯಲಿರುವ ಎನ್‌ಡಿಎ, ಈ ಬಾರಿ 326 ಸ್ಥಾನಗಳನ್ನು ಗಳಿಸುವ ಸಾಧ್ಯತೆಯಿದೆ. ಆದರೆ, ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಈ ವರ್ಷದ ಜನವರಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಎನ್‌ಡಿಎ 352 ಸ್ಥಾನಗಳನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿತ್ತು. ಅದಕ್ಕೆ ಹೋಲಿಸಿದರೆ ಪ್ರಸ್ತುತ ಸಮೀಕ್ಷೆಯಲ್ಲಿ 26 ಸ್ಥಾನಗಳ ಕುಸಿತ ಕಂಡುಬಂದಿದೆ. ಇದು ಸರ್ಕಾರದ ಜನಪ್ರಿಯತೆಯಲ್ಲಿ ತುಸು ಇಳಿಕೆ ಆಗಿರುವುದನ್ನು ಸೂಚಿಸುತ್ತದೆ.

ಇನ್ನು ‘ಮೋದಿ ಮತ್ತು ಅಮಿತ್ ಶಾ ಅವರು 2024ರ ಚುನಾವಣಾ ಪ್ರಚಾರದ ವೇಳೆ ಘೋಷಿಸಿದ್ದ ‘ನಾಲ್ಕು ನೂರು ಪಾರ್’ ಗುರಿಯಿಂದ ಈ ಅಂಕಿಅಂಶಗಳು ದೂರವಿದ್ದರೂ, ಮತದಾರರ ವಿಶ್ವಾಸ ಇನ್ನೂ ಎನ್‌ಡಿಎ ಮೇಲಿದೆ ಎಂಬುದನ್ನು ಈ ಸಂಖ್ಯೆಗಳು ಸಾಬೀತುಪಡಿಸುತ್ತವೆ. ಹಾಗಾದರೆ, ಎನ್‌ಡಿಎ ಸೀಟುಗಳು ಕಡಿಮೆಯಾದಾಗ ಅದರ ಲಾಭ ವಿರೋಧ ಪಕ್ಷಗಳಿಗೆ ಸಿಕ್ಕಿದೆಯಾ? ಸಮೀಕ್ಷೆಯ ಪ್ರಕಾರ, ಅಂತಹ ಯಾವುದೇ ದೊಡ್ಡ ಬದಲಾವಣೆ ಕಂಡುಬಂದಿಲ್ಲ. ಬದಲಿಗೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟಕ್ಕೆ ಪ್ರಸ್ತುತ 185 ಸ್ಥಾನಗಳು ದೊರೆಯಲಿವೆ ಎಂದು ಅಂದಾಜಿಸಲಾಗಿದೆ.

ಇದು ಜನವರಿಯ ಸಮೀಕ್ಷೆಯಲ್ಲಿದ್ದ 182 ಸ್ಥಾನಗಳಿಗೆ ಹೋಲಿಸಿದರೆ ಅತ್ಯಲ್ಪ ಹೆಚ್ಚಳವಾಗಿದೆ. ಆದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಬ್ಲಾಕ್ ಗಳಿಸಿದ್ದ 234 ಸ್ಥಾನಗಳಿಗೆ ಹೋಲಿಸಿದರೆ ಇದು ಗಮನಾರ್ಹ ಕುಸಿತವಾಗಿದೆ. ಇತ್ತೀಚಿನ ಆಗಸ್ಟ್ ಆವೃತ್ತಿಗಾಗಿ, ಜುಲೈ 1 ರಿಂದ ಆಗಸ್ಟ್ 25ರವರೆಗೆ ದೇಶದಾದ್ಯಂತ ಒಟ್ಟು 25,184 ಜನರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ಯುವ ಮತದಾರರ ಅಥವಾ ಜೆನ್-ಝೀ ವರ್ಗದ ಸವಾಲುಗಳನ್ನು ಎದುರಿಸುತ್ತಿರುವ ನಡುವೆಯೂ ಕೇಂದ್ರ ಸರ್ಕಾರದ ಮೇಲಿನ ಸಾರ್ವಜನಿಕ ನಂಬಿಕೆ ಹೇಗಿದೆ ಎಂಬುದನ್ನು ಈ ಸಮೀಕ್ಷೆ ಆಳವಾಗಿ ವಿಶ್ಲೇಷಿಸಿದೆ ಅಂತ ಹೇಳಲಾಗ್ತಿದೆ.

ಇದೆಲ್ಲದರ ನಡುವೆ ‘ನಿರೀಕ್ಷಿತ ಗುರಿಗಿಂತ ಸ್ಥಾನಗಳು ಕಡಿಮೆಯಾಗಿದ್ದರೂ ಮತ್ತು ಸಣ್ಣಪುಟ್ಟ ಸವಾಲುಗಳಿದ್ದರೂ, ಸದ್ಯದ ಮಟ್ಟಿಗೆ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರಕ್ಕೆ ಯಾವುದೇ ಗಂಭೀರ ಅಪಾಯವಿಲ್ಲ ಎಂಬುದನ್ನು ಈ ಸಮೀಕ್ಷೆ ಸ್ಪಷ್ಟಪಡಿಸಿದೆ. ಮುಂದಿನ ಮೂರು ವರ್ಷಗಳಲ್ಲಿ ರಾಜಕೀಯ ಪರಿಸ್ಥಿತಿ ಯಾವ ದಿಕ್ಕಿಗೆ ತಿರುಗಲಿದೆ ಎಂಬುದನ್ನು ಕಾದುನೋಡಬೇಕು. ಈ ಬಗ್ಗೆ ನಿಮ್ಮನಿಸಿಕೆ ಏನು ಕಾಮೆಂಟ್ ಮಾಡಿ.

About The Author