ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ತನಿಖೆ ಪೂರ್ಣಗೊಂಡಿದ್ದು ನಾಳೆ ನ್ಯಾಯಾಲಯ (Court)ಕ್ಕೆ ಚಾರ್ಜ್‌ಶೀಟ್ (Charge Sheet) ಸಲ್ಲಿಕೆಯಾಗುವ ಸಾಧ್ಯತೆಯಿದೆ. 100ಕ್ಕೂ ಹೆಚ್ಚು ಸಾಕ್ಷಿದಾರರ ಹೇಳಿಕೆ ಹಾಗೂ 4 ಸಾವಿರಕ್ಕೂ ಹೆಚ್ಚು ದೋಷಾರೋಪ ಪಟ್ಟಿಯನ್ನು ಪೊಲೀಸರು ಸಿದ್ಧಪಡಿಸಿದ್ದು, ಕಾನೂನು ತಜ್ಷರು 2-3 ಬಾರಿ ಚಾರ್ಜ್‌ಶೀಟ್ ಪ್ರತಿಗಳನ್ನು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ (B Dayananda) ಅವರು ಖುದ್ದು ಚಾರ್ಜ್‌ಶೀಟ್ ಡ್ರಾಫ್ಟ್ ಕಾಪಿ ಮೇಲೆ ನಿಗಾ ಇಟ್ಟಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ಚಾರ್ಜ್‌ಶೀಟ್‌ನಲ್ಲಿರುವ ಲೋಪವನ್ನು ವಕೀಲರು ಪ್ರಸ್ತಾಪಿಸಿ ಆರೋಪಿಗಳನ್ನು ಪಾರು ಮಾಡುತ್ತಾರೆ. ಹೀಗಾಗಿ ಕಾನೂನು ತಜ್ಞರ ಸಲಹೆ ಪಡೆದಿರುವ ಪೊಲೀಸರು ನಟ ದರ್ಶನ್ ಹಾಗೂ 17 ಆರೋಪಿಗಳ ವಿರುದ್ಧ ಆರೋಪ ಪಟ್ಟಿಯನ್ನ ಸಿದ್ಧಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಬಹುತೇಕ ಚಾರ್ಜ್‌ಶೀಟ್ ಸಿದ್ಧಗೊಂಡಿದ್ದು, ಕಿಡ್ನಾಪ್, ಕೊಲೆ ಮತ್ತು ಮೃತದೇಹದ ಸಾಗಾಟದ ವಿಚಾರಗಳನ್ನು ದೋಷಾರೋಪ ಪಟ್ಟಿಯಲ್ಲಿ ದಾಖಲಿಸಲಾಗಿದೆ ಎಂದು ಹೇಳಲಾಗಿದೆ. ಅಲ್ಲದೆ ಪ್ರಕರಣದ ಎಲ್ಲಾ 17 ಆರೋಪಿಗಳ ಹೇಳಿಕೆಗಳನ್ನು ಕೂಡ ಚಾರ್ಜ್ಶೀಟ್ನಲ್ಲಿ ದಾಖಲಿಸಲಾಗಿದೆ. ಪ್ರಕರಣದ 2ನೇ ಆರೋಪಿ ನಟ ದರ್ಶನ್ ಬಟ್ಟೆ ಮೇಲಿನ ರಕ್ತದ ಕಲೆಯ ಸಂಪೂರ್ಣ ರಿಪೋರ್ಸ್, 100ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆ ಮತ್ತು ಆರೋಪಿಗಳ ಹೇಳಿಕೆಗಳನ್ನು ಆರೋಪ ಪಟ್ಟಿಯಲ್ಲಿ ದಾಖಲಿಸಲಾಗಿದೆ ಎನ್ನಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ 17 ಆರೋಪಿಗಳಿಗೆ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ಪೊಲೀಸರು 4 ಸಾವಿರ ಪುಟಗಳ ಚಾರ್ಜ್‌ಶೀಟ್ ಸಿದ್ಧಪಡಿಸಿದ್ದಾರೆ. ನಟ ದರ್ಶನ್ ಸೇರಿದಂತೆ ಪ್ರಕರಣದ 17 ಆರೋಪಿಗಳ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಅನ್ನು ಸಲ್ಲಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.