ತಾಯಿಯ ಎದೆಹಾಲು ಅಮೃತಕ್ಕೆ ಸಮಾನ. ನವಜಾತ ಶಿಶುಗಳ ಪಾಲಿಗೆ ಅಮೃತವಾಗಿರುವ ತಾಯಿಯ ಎದೆ ಹಾಲು ವಿಷವಾಗುತ್ತಿದೆ. ಬಿಹಾರದ 6 ಜಿಲ್ಲೆಗಳ ತಾಯಂದಿರು, ತಮ್ಮ ಕರುಳ ಕುಡಿಗೆ ಉಣಿಸುವ ಹಾಲಿನಲ್ಲೇ ಯುರೇನಿಯಂ ಅಂಶ ಪತ್ತೆಯಾಗಿದೆ. ಸಂಶೋಧನಾ ಸಂಸ್ಥೆಯೊಂದು ಅಘಾತಕಾರಿ ವರದಿ ನೀಡಿದೆ.
ದೆಹಲಿಯ ಏಮ್ಸ್ ಸಹಯೋಗದಲ್ಲಿ ಪಾಟ್ನಾದ ಮಹಾವೀರ್ ಕ್ಯಾನ್ಸರ್ ಸಂಸ್ಥೆ, 6 ಜಿಲ್ಲೆಗಳ ವ್ಯಾಪ್ತಿಯ 40 ಮಂದಿ ಹಾಲುಣಿಸುತ್ತಿರುವ ತಾಯಂದಿರನ್ನು ಆಯ್ಕೆ ಮಾಡಿತ್ತು. ಅವರ ಎದೆಹಾಲನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿತ್ತು. ಈ ವೇಳೆ 5 ಪಿಪಿಬಿಯಷ್ಟು ಯುರೇನಿಯಂ ಪತ್ತೆಯಾಗಿದೆ. ಸಂಗ್ರಹಿಸಲಾದ ಎಲ್ಲರ ಎದೆಹಾಲಲ್ಲೂ ಯುರೇನಿಯಂ – 238 ಕಣಗಳು ಪತ್ತೆಯಾಗಿವೆ.
ಇಂಥಾ ಹಾಲು ಕುಡಿದ ಶೇಕಡ 70ರಷ್ಟು ಮಕ್ಕಳು ಕ್ಯಾನ್ಸರ್ ಹೊರತಾದ ಗಂಭೀರ ಸ್ವರೂಪದ ಕಾಯಿಲೆಗಳಿಗೆ ತುತ್ತಾಗಬಹುದು. ಮಕ್ಕಳಲ್ಲಿ ಕಿಡ್ನಿ, ನರ ರೋಗ ಮತ್ತಿತರೆ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ತಾಯಿಗಿಂತ ಮಕ್ಕಳಿಗೆ ಅಪಾಯ ಹೆಚ್ಚು ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಬಿಹಾರ ರಾಜ್ಯದ ಹಲವು ಜಿಲ್ಲೆಗಳ ವ್ಯಾಪ್ತಿಯಲ್ಲಿ, ಕುಡಿಯುವ ನೀರಿಗೆ ಅಂತರ್ಜಲವೇ ಮೂಲ. ಭೂಮಿಯ ಮೇಲ್ಮಟ್ಟದಲ್ಲೇ ಹೆಚ್ಚಿನ ಯುರೇನಿಯಂ ಅಂಶ ಕಂಡುಬರುತ್ತದೆ. ಈ ನೀರು, ಅದರಲ್ಲಿ ಬೆಳೆದ ಆಹಾರ ಸೇವಿಸುವ ಕಾರಣ ತಾಯಂದಿರ ದೇಹಕ್ಕೆ ಯುರೇನಿಯಂ ಸೇರ್ಪಡೆಯಾಗುತ್ತಿದೆ. ಜೊತೆಗೆ ಗಾಳಿಯಿಂದಲೂ ಯುರೇನಿಯಂ ಕಣಗಳು ದೇಹವನ್ನು ಸೇರುತ್ತಿದೆ. ಅಂತಿಮವಾಗಿ ಅದು ಎದೆ ಹಾಲಿನ ಭಾಗವಾಗಿ ಮಗುವಿಗೂ ವರ್ಗಾವಣೆಯಾಗುತ್ತಿದೆ.
ಸಮಷ್ಠೀಪುರ, ಬೇಗುಸರಾಯ್, ಭೋಜ್‌ಪುರ, ಖಗಾರಿಯಾ, ಕಟಿಹಾರ್ ಮತ್ತು ನಳಂದ ಜಿಲ್ಲೆಗಳಲ್ಲಿ, ನಡೆಸಿದ ಸಂಶೋಧನೆ ವೇಳೆ ಈ ಆತಂಕಕಾರಿ ಬೆಳವಣಿಗೆ ಕಂಡುಬಂದಿದೆ. ಆದರೂ ವರದಿ ಬಗ್ಗೆ ತೀವ್ರ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು, ಅಣು ವಿಜ್ಞಾನಿ ಡಾ। ದಿನೇಶ್ ಕೆ. ಅಸ್ವಾಲ್ ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 30 ಪಿಪಿಬಿಯಷ್ಟು ಯುರೇನಿಯಂ ದೇಹ ಸೇರುವುದು ಅಪಾಯಕಾರಿಯಲ್ಲ. ಹೀಗಿರುವಾಗ ಎದೆಹಾಲಿನಲ್ಲಿ ಅದು ಬರೀ 5 ಪಿಪಿಬಿಯಷ್ಟು ಕಡಿಮೆ ಪ್ರಮಾಣದಲ್ಲಿ ಇದೆ. ಹೀಗಾಗಿ ತೀವ್ರ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.

