Dharwad News: ಧಾರವಾಡ: ಧಾರವಾಡದಲ್ಲಿ ತಾಯಂದಿರಿಂದಲೇ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ವಂತ ಅಣ್ಣ- ತಮ್ಮಂದಿರ ಪತ್ನಿಯರಿಂದಲೇ ಈ ಕೃತ್ಯ ನಡೆದಿದೆ.
ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ರೇಷ್ಮಾ ಮತ್ತು ಪ್ರಿಯಾಂಕಾ ಸಾಂಬ್ರಾಣಿ ಎಂಬ ಮಹಿಳೆಯರು, ತಮ್ಮ ಪ್ರಿಯಕರನೊಂದಿಗೆ ಸೇರಿ, ಮತ್ತ ಮಕ್ಕಳನ್ನು ತಾವೇ ಕಿಡ್ನ್ಯಾಪ್ ಮಾಡಿಸಿದ್ದಾರೆ. ನವೆಂಬರ್ 7ರಂದು ಇಬ್ಬರು ತಾಯಂದಿರು ಮತ್ತು 6 ಮಕ್ಕಳು ನಾಪತ್ತೆಯಾಗಿದ್ದರು.
ಈ ವೇಳೆ ಮನೆಯವರು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಕಿಡ್ನಾಪ್ ಕೇಸ್ ಬೇಧಿಸಿ ಆರು ಮಕ್ಕಳನ್ನು ರಕ್ಷಿಸಿದ್ದಾರೆ. ಈ ವೇಳೆ ತಿಳಿದು ಬಂದಿದ್ದೇನೆಂದರೆ, ರೇಷ್ಮಾ ಮತ್ತು ಪ್ರಿಯಾಂಕಾ, ಮುತ್ತುರಾಜ್ ಮತ್ತು ಸುನೀಲ್ ಎಂಬುವವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು. ಈ ಇಬ್ಬರು ಚಾಲಾಕಿ ಮಹಿಳೆಯರು ತಮ್ಮ ಮಕ್ಕಳನ್ನು ಹಾಸ್ಟೇಲ್‌ಗೆ ಸೇರಿಸುವುದಾಗಿ ಕರೆದುಕೊಂಡು ಹೋಗಿದ್ದಾರೆ.
ಬಳಿಕ ತಮ್ಮ ಪ್ರಿಯಕರರಿಂದ ಮನೆಗೆ ಕಾಲ್ ಮಾಡಿಸಿ, ಮಕ್ಕಳನ್ನು ಕಿಡ್ನ್ಯಾಪ್ ಮಾಡಲಾಗಿದೆ. ಮಕ್ಕಳು ಬೇಕಾದ್ರೆ, 10 ಲಕ್ಷ ರೂಪಾಯಿ ನೀಡಿ ಎಂದು ಬೆದರಿಕೆ ಹಾಕಿಸಿದ್ದಾರೆ. ಈ ಕಾಲ್ ಬರುತ್ತಿದ್ದಂತೆ, ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು. 6 ಮಕ್ಕಳು ಒಟ್ಟಿಗೆ ನಾಾಪತ್ತೆಯಾದ ಹಿನ್ನೆಲೆ ಆತಂಕ ಸೃಷ್ಟಿಯಾಗಿತ್ತು. ಹಾಗಾಗಿ ಹೈದರಾಬಾದ್, ಮಹಾಾರಾಷ್ಟ್ರ, ಬೆಂಗಳೂರಿನಲ್ಲಿ ಮಕ್ಕಳಿಗಾಗಿ ಹುಡುಕಾಟ ನಡೆದಿತ್ತು.
ಕೊನೆಗೆ ಮಕ್ಕಳ ಸಮೇತ ತಾಯಂದಿರು ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಇವರ ಜೊತೆಗೆ, ಇವರ ಪ್ರಿಯಕರರು ಇದ್ದರು. ಈ ನಾಲ್ವರನ್ನೂ ಬಂಧಿಸಿದ ಪೊಲೀಸರು ಮಕ್ಕಳನ್ನು ಮಕ್ಕಳ ಕಲ್ಯಾಣ ಇಲಾಖೆಗೆ ಒಪ್ಪಿಸಿದ್ದಾರೆ. ಪ್ರಿಯಾಂಕಾಳ ಪತಿ ತೀರಿಹೋಗಿದ್ದು, ಬಳಿಕ ಶಿಕಾರಿಪುರದ ಮುತ್ತುರಾಜು ಎಂಬುವನೊಂದಿಗೆ ಪ್ರಿಯಾಂಕಾ ಸಂಬಂಧವಿರಿಸಿಕೊಂಡಿದ್ದಳು. ಆದರೆ ಪತಿ ಇರುವಾಗಲೇ ರೇಷ್ಮಾ ಎಂಬಾಕೆ, ಸುನೀಲ್ ಎಂಬುವನೊಂದಿಗೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದಳು.
ಆಗಾಗ ತಾವಿಬ್ಬರು ಮನೆ ಬಿಟ್ಟು ಹೋಗುವುದಾಗಿ ಮನೆಯವರಿಗೆ ಹೆದರಿಸುತ್ತಿದ್ದರು. ಆದರೆ ಮಕ್ಕಳಿರುವ ಕಾರಣ, ಹಾಗೆಲ್ಲ ಮಾಡುವುದಿಲ್ಲವೆಂದು ಮನೆಯವರು ಅಂದುಕೊಂಡಿದ್ದರು. ಆದರೆ ನವೆಂಬರ್ 7ರಂದು ಮಕ್ಕಳನ್ನು ರಾಣೆಬೆನ್ನೂರು ಹಾಸ್ಟೇಲ್‌ಗೆ ಸೇರಿಸಿ ಬರುತ್ತೇವೆ ಎಂದು ಮನೆಯಿಂದ ಹೊರಬಿದ್ದಿದ್ದರು. ಆದರೆ ಪ್ರಿಯಕರನ ಜೊತೆ ಸೇರಿ ಪ್ಲಾನ್ ಮಾಡಿ, ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.