www.karnatakatv.net : ಬಹುಷಃ ಅದು 2005 ರ ಏಪ್ರಿಲ್ ತಿಂಗಳು ಅಂತ ಕಾಣುತ್ತೆ ಹೇಳಿ ಕೇಳಿ ಶಾಲೆಗೆ ಬೇಸಿಗೆ ರಜೆ ಇರುತ್ತಿದ್ದ ಕಾಲ ಅದು. ಬೆಳಗ್ಗೆ ಕ್ರಿಕೆಟ್ ನೋಡುವುದು ಸಂಜೆ ಕ್ರಿಕೆಟ್ ಆಡುವುದು ಇಷ್ಟೆ ನಮ್ಮ ದಿನಚರಿಯಾಗಿತ್ತು. ಅಂದೇಕೋ ಟಿವಿ ನೋಡಲು ಮನಸ್ಸೇ ಇಲ್ಲದೆ ಸಪ್ಪಗೆ ಕೂತಿದ್ದೆ. ಅಷ್ಟರಲ್ಲಿ ಎಲ್ಲೋ ಇದ್ದ ಅಣ್ಣ ಎದ್ದು ಬಿದ್ದು ಓಡಿ ಬಂದು ಟಿವಿ ಹಾಕೋ ಇಂಡಿಯಾ ಪಾಕಿಸ್ತಾನ ಮ್ಯಾಚ್ ನೆಡಿತಿದೆ ಅಂದ, ನಾನು ಹಾಕುವಷ್ಟರಲ್ಲೆ ತೆಂಡುಲ್ಕರ್ 2 ರನ್ ಗೆ ರನೌಟಾಗಿ ಪೆವಿಲಿಯನ್ ಸೇರಿದ್ದ. ಇನ್ನೇನು ದ್ರಾವಿಡ್ ಬರ್ತಾನೆ ಆಮೇಲೆ ನಮ್ ಯುವಿ ಬರ್ತಾನೆ ಅಂತ ನಾವು ಅಂದುಕೊಳ್ಳುವಷ್ಟರಲ್ಲೆ ಸರ್ಪ್ರೈಸ್ ಎನ್ನುವಂತೆ ಉದ್ದ ಕೂದಲಿನ ವ್ಯಕ್ತಿ ಒಬ್ಬ ಬ್ಯಾಟನ್ನು ಸರ ಸರನೆ ಬೀಸುತ್ತಾ ಮೈದಾನಕ್ಕೆ ಬಂದ. ಅಯ್ಯೋ ಇವನ್ಯಾಕೋ ಬಂದ ಗಂಗೂಲಿಗೇನಾದ್ರೂ ತಲೆ ಕೆಟ್ಟಿದ್ಯೇನೋ ಹೋಗಿ ಹೋಗಿ ಇವ್ನ ಕಳ್ಸಿದಾನಲ್ಲೋ ಅಂತ ಎಲ್ಲರೂ ಮಾತಾಡಿಕೊಂಡಿದ್ವಿ. ಹಿಂದಿನ ಪಂದ್ಯಗಳಲ್ಲಿ ಕಳೆಪೆ ಪ್ರದರ್ಶನ ನೀಡಿದ್ದ ಇವನು ಇವತ್ತು ಒಂದೇ ವಿಕೆಟಿಗೆ ಬಂದಿದ್ದಾನಲ್ಲಾ ಅಂತ ಚರ್ಚೆಯೂ ಶುರುವಾಗಿತ್ತು. ಆದರೆ ಅವತ್ತು ಅವನಾಡಿದ ಆಟ ಇಡೀ ದೇಶದ ಕ್ರಿಕೆಟ್ ಅಭಿಮಾನಿಗಳಲ್ಲಿ ಅವನ ಮೇಲೊಂದು ಭರವಸೆ ಮೂಡಿಸುವಂತಿತ್ತು ಬರೋಬ್ಬರಿ 148 ರನ್ ಬಾರಿಸಿ ಕ್ರಿಕೆಟ್ ರಸಿಕರ ಮನದಲ್ಲೊಂದು ಜಾಗ ಪಡೆದೇ ಬಿಟ್ಟಿದ್ದ.

ಹೀಗೆ ಪಂದ್ಯದಿಂದ ಪಂದ್ಯಕ್ಕೆ ಉತ್ತಮ ಪ್ರದರ್ಶನ ನೀಡುತ್ತಿದ್ದ ಆಟಗಾರ ಧೋನಿ ಎಂದು ನಮಗೆ ಮೊದಲ ಸೆಂಚುರಿ ಬಾರಿಸಿದಾಗಲೇ ಗೊತ್ತಾಗಿತ್ತಾದರೂ ಚಿರಪರಿಚಿತನಾದದ್ದು ಏಕಾಏಕಿ ತಂಡದ ನಾಯಕನಾದ ಮೇಲೆ. ಧೋನಿ ನಾಯಕನಾದ ಮೇಲೆ ನಮ್ಮ ಭಾರತ ಕ್ರಿಕೆಟ್ ತಂಡದ ಛಾಪು, ದಿಕ್ಕು ಇವೆಲ್ಲವೂ ಬದಲಾಗಿದ್ದಂತೂ ಹೌದು. ಧೋನಿಯ ನಾಯಕತ್ವದಲ್ಲಿ ಗೆದ್ದ ಪಂದ್ಯಗಳು, ಸರಣಿಗಳು ಸಾಕಷ್ಟಿವೆ. ತಾನು ಕಟ್ಟಿದ ಗೆಲುವಿನ ಕೋಟೆಯ ರಾಜನಾಗಿ ಧೋನಿ ರಾರಾಜಿಸಿದರೆ ಸೆಹ್ವಾಗ್ , ಗಂಭೀರ್, ಜಹೀರ್ ಖಾನ್, ತೆಂಡುಲ್ಕರ್, ದ್ರಾವಿಡ್, ಮುಂತಾದವರು ಆ ಕೋಟೆಯ ದಿಟ್ಟ ಕಾವಲುಗಾರರಾಗಿ ನಿಂತವರು. ಆದರೆ ಧೋನಿ ಸೈನ್ಯದ ಸೇನಾಧಿಪತಿಯಾಗಿದ್ದವನು ಮಾತ್ರ ಯುವರಾಜ್ ಸಿಂಗ್. ಧೋನಿಯ ಎಲ್ಲಾ ಗೆಲುವಿನ ಮೆಟ್ಟಿಲುಗಳ ತೆರೆಮರೆಯ ಕಾಯಿಯಾಗಿ ಉಳಿದವನೂ ಅವನೇ.
2007 ರ ಟಿ-20 ವಿಶ್ವಕಪ್ನಲ್ಲಿ ತಂಡದ ಗೆಲುವಿಗೆ ಭದ್ರ ಅಡಿಪಾಯ ಹಾಕಿದವನೂ ಯುವರಾಜನೇ, 2011 ರ ವಿಶ್ವಕಪ್ ಗೆಲುವಿನಲ್ಲೂ ಸರಣಿ ಶ್ರೇಷ್ಠನಾಗಿ ಹೊರಹೊಮ್ಮುವುದರ ಮೂಲಕ ತಂಡವನ್ನು ಗೆಲುವಿನ ಹಂತಕ್ಕೆ ಕೊಂಡೊಯ್ದವನೂ ಅದೇ ಯುವರಾಜನೆ. ನಾನು ಧೋನಿಗಿಂತ ಯುವಿಯ ದೊಡ್ಡ ಅಭಿಮಾನಿಯಾಗಿದ್ದೆ ಆದರೆ ಅವರಿಬ್ಬರೂ ಒಟ್ಟೊಟ್ಟಿಗೆ ಜೊತೆಯಾಟ ಆಡುವುದನ್ನು ನೋಡುವಾಗ ಅಬ್ಬಾ ಎಂಥಾ ಆಟಗಾರರಪ್ಪ ಎಂಬಂತೆ ಮೈಯೆಲ್ಲಾ ರೋಮಾಂಚನವಾಗುತ್ತಿತ್ತು. ಗಮನಿಸಿ ನೋಡಿದರೆ ಒಬ್ಬರ ಸಾಧನೆಗಳಿಗೆ ಪಿಚ್ ಮೇಲೆ ಸಾಕ್ಷಿಯಾದವರು ಇನ್ನೊಬ್ಬರು. ಯುವಿ 6 ಬಾಲಿಗೆ 6 ಸಿಕ್ಸ್ ಹೊಡೆದಾಗ, ಧೋನಿ ವಿಶ್ವಕಪ್ನಲ್ಲಿ ಕೊನೆಯ ಸಿಕ್ಸರ್ ಸಿಡಿಸಿದಾಗ, ಇಬ್ಬರೂ ಭರ್ಜರಿ ಜೊತೆಯಾಟವಾಡಿ ಪಾಕಿಸ್ತಾನವನ್ನು ಹೀನಾಮಾನವಾಗಿ ಹೊಡೆದಾಗ, ಅಷ್ಟೇ ಯಾಕೆ ಯುವಿ ಕೊನೆ ಕೊನೆಗೆ ಆಡಿ ಬರೋಬ್ಬರಿ 150 ರನ್ಗಳನ್ನು ಸಿಡಿಸಿದ ಇಂಗ್ಲೆಂಡ್ ವಿರುದ್ಧದ ಪಂದ್ಯವೇ ಇರಬಹುದು. ನನ್ನಂತೆ ಅವರಿಬ್ಬರ ಜೊತೆಯಾಟಕ್ಕೆ, ಗೆಳೆತನಕ್ಕೆ ಅಭಿಮಾನಿಗಳಾಗಿದ್ದವರು ನೂರಾರು ಮಂದಿಯಿದ್ದಾರೆ. ಆಗಲೇ ಹೇಳಿದಂತೆ ಅವರಿಬ್ಬರೂ ಒಟ್ಟಿಗೆ ಆಟವಾಡುವುದನ್ನು ನೋಡುತ್ತಿದ್ದರೆ ರಾಜ ಮತ್ತು ಸೇನಾಧಿಪತಿಗಳನ್ನು ನೋಡಿದಂತೆಯೇ ಆಗುತ್ತಿತ್ತು.
ಯುವಿ ನಿವೃತ್ತಿ ಘೋಶಿಸಿದಾಗ ಮನದ ಮೂಲೆಯಲ್ಲಿ ಎಲ್ಲೋ ಒಂಥರಾ ಸಂಕಟದ ಭಾವನೆ ಇತ್ತಾದರೂ ಅಂದಿನಿಂದ ಕ್ರಿಕೆಟ್ ಮೇಲಿದ್ದ ಆಸಕ್ತಿಯೂ ಕಡಿಮೆಯಾಗುತ್ತಾ ಬಂದಿತ್ತು. ಕೊನೆ ಕೊನೆಗೆ ಧೋನಿ ಇದ್ದಾನಲ್ಲಾ ಹೇಗಾದ್ರು ಮಾಡಿ ಗೆಲ್ಲಿಸ್ತಾನೆ ಮ್ಯಾಚ್ ನೋಡೋಣ ಅಂತ ನೋಡಿದ್ದೂ ಉಂಟು. ನಿನ್ನೆ ಧೋನಿಯೂ ವಿದಾಯ ಹೇಳಿದ್ದಾಯ್ತು, ಇನ್ಯಾರ ಜೊತೆಯಾಟಕ್ಕಾಗಿ ಕಾಯಲಿ, ಇನ್ಯಾರು ಸೋಲುವ ಹಂತದಲ್ಲೂ ಗೆಲ್ಲಿಸಬಲ್ಲರು ಎಂದು ನಂಬಲಿ, ಹುಲಿಗಳಂತೆ ಘರ್ಜಿಸಿ ಮುನ್ನುಗ್ಗುತ್ತಿದ್ದ ಭಾರತೀಯ ಕ್ರಿಕೆಟ್ ತಂಡದ ಒಂದೊಂದೇ ಕೊಂಡಿಗಳು ಕಳಚಿ ಬಿದ್ದಾಗ ಮನಸ್ಸಿಗೆ ಏನೋ ನೋವಾದಂತಾಗುತ್ತಿತ್ತು, ಆದರೆ ಕೊನೆಯ ಕೊಂಡಿಯಾಗಿ ಉಳಿದುಕೊಂಡಿದ್ದ ಧೋನಿಯೂ ವಿದಾಯ ಹೇಳಿದ ಮೇಲೆ ಯಾಕೋ ಕ್ರಿಕೆಟ್ ಮೇಲಿನ ಆಸಕ್ತಿಯೇ ಸತ್ತಂತೆ ಭಾಸವಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತೊಬ್ಬ ಸೆಹ್ವಾಗ್ ಇನ್ನೊಬ್ಬ ಗಂಭೀರ್ ಅಥವಾ ಯುವು ಧೋನಿಯಂತೆ ಮತ್ತೊಬ್ಬರು ಬರುವರೋ ಇಲ್ಲವೋ ನಾ ಕಾಣೆ ಆದರೆ ಇವರೆಲ್ಲರೂ ನಮ್ಮ ಮನಸ್ಸಿನಲ್ಲಿ, ಬಾಲ್ಯದಿಂದಲೂ ಸ್ಥಾನ ಪಡೆದಿರುವ ಸೂಪರ್ ಹೀರೋಗಳಾಗಿ ಉಳಿದುಕೊಂಡಿರುತ್ತಾರೆ ಎಂಬುದಂತೂ ಸತ್ಯ.
ಅಭಿರಾಮ್ ಶರ್ಮ, ಕೊಪ್ಪ
