Mumbai News: ಬರ್ತ್‌ಡೇ ಅಂದ್ರೆ ಅದು ಸಂಭ್ರಮದ ಘಳಿಗೆ. ಆ ದಿನ ವ್ಯಕ್ತಿ ಖುಷಿ ಖುಷಿಯಾಗಿರಬೇಕು. ಇನ್ನು ಯುವ ಪೀಳಿಗೆ ವಿಷಯಕ್ಕೆ ಬಂದ್ರೆ, ಇತ್ತೀಚೆಗೆ ಪಾರ್ಟಿ ಮಾಡೋದು ಜೋರಾಗಿದೆ. ಪಾರ್ಟಿ ಮಾಡೋದು, ಎಂಜಾಯ್ ಮಾಡೋದು ತಪ್ಪೇನಲ್ಲ. ಆದರೆ ಇಲ್ಲಿ ಪಾರ್ಟಿ ಮಾಡುವ ನೆಪದಲ್ಲಿ ಬರ್ತ್‌ಡೇ ಬಾಯ್‌ನೇ ಸುಟ್ಟು ಹಾಕಲಾಗಿದೆ.
ಮಹಾರಾಷ್ಟ್ರದ ಮುಂಬೈನ ಕುರ್ಲಾದಲ್ಲಿ ಈ ಘಟನೆ ನಡೆದಿದ್ದು, 21 ವರ್ಷದ ಮಹಮ್ಮದ್ ರೆಹಮಾನ್ ಗಂಭೀರ ಸ್ಥಿತಿಯಲ್ಲಿದ್ದಾನೆ. ನವೆಂಬರ್ 26ರಂದು ಈತನ ಬರ್ತ್‌ಡೇ ಇದ್ದು, ಮುನ್ನ ದಿನ ರಾತ್ರಿ ಆತನ ಸ್ನೇಹಿತರು ಕೇಕ್ ಕತ್ತರಿಸಲು ಬರುವಂತೆ ಕರೆದಿದ್ದಾರೆ. ಸ್ನೇಹಿತರು ಪ್ರೀತಿಯಿಂದ ಕರೆದಿದ್ದಾರೆಂದು ರೆಹಮಾನ್ ರಾತ್ರಿ ಸ್ನೇಹಿತರು ಹೇಳಿದ ಸ್ಥಳಕ್ಕೆ ಹೋಗಿದ್ದಾನೆ.
ಸ್ನೇಹಿತರು ಎಂಜಾಯ್ ಮಾಡುವ ನೆಪದಲ್ಲಿ ಆತನ ಮೇಲೆ ಕಲ್ಲು ಮತ್ತು ಎಗ್ ಎಸೆದಿದ್ದಾರೆ. ಬಳಿಕ ತಮಾಷೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಸ್ಥಳದಲ್ಲೇ ಯುವಕನ ಸ್ಥಿತಿ ಗಂಭೀರವಾಗಿ, ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಸ್ನೇಹಿತರಾದ ಅಯಾಜ್ ಮಲೀಕ್, ಅಶ್ರಫ್ ಮಲೀಕ್, ಖಾಸಿಂ ಚೌದರಿ, ಹುಸೈಫಾ ಖಾನ್, ಷರೀಫ್ ಶೇಕ್‌ನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿಗಳು ನಾವು ತಮಾಷೆಗಾಗಿ ಹಾಗೆ ಮಾಡಿದ್ದೆವು. ಸಾಯಿಸುವ ಯಾವುದೇ ಯೋಚನೆ ಇರಲಿಲ್ಲ ಎಂದಿದ್ದಾರೆ.
ಸಿಸಿಟಿವಿಯಲ್ಲಿ ಸ್ನೇಹತರ ಕ್ರೂರತ್ವ ಸೆರೆಯಾಗಿದ್ದು, ಕಲ್ಲು, ಎಗ್ ಎಸೆದಿದ್ದು, ಪೆಟ್ರೋಲ್ ಸುರಿದು, ಲೈಟರ್ ಉರಿಸಿದ್ದು ರೆಕಾರ್ಡ್ ಆಗಿದೆ. ಅಲ್ಲದೇ ಬೆಂಕಿ ತಗುಲಿ ರೆಹಮಾನ್ ಕೂಗುತ್ತಿದ್ದರೂ, ಆತನ ಸ್ನೇಹಿತರು ಮಾತ್ರ, ಹೆದರಿ ಓಡಿ ಹೋಗಿದ್ದಾರೆ.
ಬಳಿಕ ರೆಹಮಾನ್ ತಾನು ಧರಿಸಿದ್ದ ಶರ್ಟ್ ತೆಗೆದು, ವಾಚ್‌ಮ್ಯಾನ್ ರೂಮಿಗೆ ಓಡಿದ್ದು, ಆತನ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆ. ಸದ್ಯ ಸ್ನೇಹಿತರ ವಿರುದ್ಧ ಕೇಸ್ ದಾಖಲಾಗಿದ್ದು, ರೆಹಮಾನ್ ಪರಿಸ್ಥಿತಿ ಗಂಭೀರವಾಗಿದೆ.

