ಕೇವಲ ಚಿಕನ್ ಪೀಸ್ ವಿಚಾರಕ್ಕೆ ಜಗಳವಾಗಿ ಸ್ನೇಹಿತನ ಮದುವೆ ಪಾರ್ಟಿಯಲ್ಲೇ ಕೊಲೆಯಾದ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ದಾರುಣ ಘಟನೆ ನಡೆದಿದೆ. ಇಷ್ಟು ಚಿಕ್ಕ ಚಿಕ್ಕ ಕಾರಣಕ್ಕೆ ಇಂತಹ ದೊಡ್ಡ ಅನಾಹುತ ಸಂಭವಿಸಬಹುದು ಎಂಬುದಕ್ಕೆ ಈ ಘಟನೆ ಒಂದು ಸ್ಪಷ್ಟ ಉದಾಹರಣೆ.
ಅಭಿಷೇಕ ಕೊಪ್ಪದ ಎಂಬಾತ ಕೆಲ ದಿನಗಳ ಹಿಂದೆ ಮದುವೆಯಾಗಿದ್ದ. ಯರಗಟ್ಟಿ ಪಟ್ಟಣದ ನಿವಾಸಿ. ಆತನ ಸಂತೋಷದ ಕ್ಷಣವನ್ನು ಹಂಚಿಕೊಳ್ಳಲು, ಅಭಿಷೇಕ ಸ್ನೇಹಿತರಿಗೆ ತನ್ನ ಜಮೀನಿನಲ್ಲಿ ಡಿನ್ನರ್ ಪಾರ್ಟಿಯೊಂದನ್ನು ಆಯೋಜಿಸಿದ್ದ. ಎಲ್ಲ ಸ್ನೇಹಿತರು ಖುಷಿ ಖುಷಿಯಾಗಿ ಡಿನ್ನರ್ ಪಾರ್ಟಿಗೆ ಬಂದಿದ್ದರು.
ಅದೇರೀತಿ 30 ವರ್ಷದ ವಿನೋದ ಮಲಶೆಟ್ಟಿ ಸ್ನೇಹಿತ ಅಭಿಷೇಕನ ಮದುವೆ ಡಿನ್ನರ್ ಪಾರ್ಟಿಗೆ ಬಂದಿದ್ದ. ಪಾರ್ಟಿಯಲ್ಲಿ ಚಿಕನ್ ಪೀಸ್ ವಿತರಣೆ ಮಾಡಲು ಮತ್ತೊಬ್ಬ ಸ್ನೇಹಿತ, ವಿಠ್ಠಲ ಹಾರೂಗೊಪ್ಪ, ಸ್ವಯಂ ಮುಂದೆ ಬಂದು ಕೆಲಸ ಮಾಡುತ್ತಿದ್ದ.
ಆದರೆ, ವಿನೋದನಿಗೆ ಬೇಕಾಗಿರುವಂತಹ ಚಿಕನ್ ಪೀಸ್ ಸಿಕ್ಕಿಲ್ಲ, ಕೆಲವರಿಗೆ ಕಡಿಮೆ ಊಟ ಸಿಕ್ಕಿತೆಂದು ವಿನೋದ ಮಲಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಹಾಗೆ ಮಾತಿಗೆ ಮಾತು ಬೆಳೆದು, ಮಾತಿನ ಚಕಮಕಿ ಜಗಳಕ್ಕೆ ತಿರುಗಿತು. ಕ್ಷಣಾರ್ಧದಲ್ಲಿ ಕೋಪಗೊಂಡ ವಿಠ್ಠಲ ತನ್ನ ಸ್ನೇಹಿತನ ಹೊಟ್ಟೆಗೆ ಚಾಕು ಇರಿದು ಕೊಲೆ ಮಾಡಿದ್ದಾನೆ. ತೀವ್ರ ಗಾಯಗೊಂಡ ವಿನೋದ ರಕ್ತಸ್ರಾವದಿಂದ ಸ್ಥಳದಲ್ಲೇ ಕುಸಿದು ಮೃತಪಟ್ಟಿದ್ದು, ಆರೋಪಿ ವಿಠ್ಠಲನನ್ನು ಮುರಗೋಡ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.