Friday, September 26, 2025

Latest Posts

ಹತ್ಯೆನಾ..? ಆತ್ಮಹತ್ಯೆನಾ..? ಬಂಗ್ಲೆಗುಡ್ಡದ ಮೂಳೆ ರಹಸ್ಯ!

- Advertisement -

ಧರ್ಮಸ್ಥಳದ ಬುರುಡೆ ಪ್ರಕರಣ ಸಕತ್ ಸದ್ದು ಮಾಡಿತ್ತು. ಈಗ ಧರ್ಮಸ್ಥಳದ ಬಂಗ್ಲೆಗುಡ್ಡದಲ್ಲಿ ಮಾನವನ ಅವಶೇಷಗಳು ಪತ್ತೆಯಾಗಿವೆ. ಸದ್ಯ ಇದು ರಾಜ್ಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿವೆ. ಈಗ ಲಭ್ಯವಾಗಿರುವ ಪ್ರಾಥಮಿಕ ಮಾಹಿತಿಯಂತೆ ಪತ್ತೆಯಾದ ತಲೆಬುರುಡೆಗಳು ಇತ್ತೀಚಿನವು ಅನ್ನೊದಾಗಿ ಗೊತ್ತಾಗಿವೆ. ಅವು ಬಹುತೇಕ ಪುರುಷರದ್ದು ಅಂತ ಎಸ್ಐಟಿ ಮೂಲಗಳು ಶಂಕೆ ವ್ಯಕ್ತಪಡಿಸಿವೆ.

ಬಂಗ್ಲೆಗುಡ್ಡ ಮೀಸಲು ಅರಣ್ಯ ಪ್ರದೇಶದಲ್ಲಿ ಎಸ್ಐಟಿ ಶೋಧ ಕಾರ್ಯಾಚರಣೆ ನಡೆಸಿದೆ. ಈ ವೇಳೆ ತಲೆಬುರುಡೆ, ದವಡೆ ಹಾಗೂ ಇತರೆ ಅಸ್ಥಿಪಂಜರದ ಭಾಗಗಳು ಕಂಡುಬಂದಿವೆ. ವಿವಿಧ ಭಾಗಗಳಲ್ಲಿ ಹರಡಿರುವ ಸ್ಥಿತಿಯಲ್ಲಿ ಪತ್ತೆಯಾಗಿವೆ. ಈ ಕುರಿತು ಮಾತನಾಡಿದ ಎಸ್ಐಟಿ ಮೂಲಗಳು, ಮಹಜರು ಸಂದರ್ಭದಲ್ಲಿ ಕಂಡುಬಂದ ತಲೆಬುರುಡೆಗಳು ಇತ್ತೀಚಿನದ್ದಾಗಿರುವ ಸಾಧ್ಯತೆ ಹೆಚ್ಚು. ಅವು ಪುರುಷರದ್ದಾಗಿರುವ ಸಾಧ್ಯತೆ ಇದೆ ಎಂದು ತಿಳಿಸಿವೆ.

ವಿಧಿವಿಜ್ಞಾನ ವೈದ್ಯರ ಪ್ರಾಥಮಿಕ ಅಭಿಪ್ರಾಯದ ಪ್ರಕಾರ, ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಆದರೆ ಇದು ನಿಖರವಾಗಿ ಆತ್ಮಹತ್ಯೆ ಪ್ರಕರಣವೇ ಎಂಬುದಕ್ಕೆ ಇನ್ನುಷ್ಟು ದೃಢೀಕರಣ ಬೇಕು ಎಂಬುದಾಗಿ ಎಸ್ಐಟಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಬಂಗ್ಲೆಗುಡ್ಡದಲ್ಲಿ ಒಟ್ಟು 10 ಎಕರೆಗೂ ಹೆಚ್ಚು ವಿಶಾಲ ಪ್ರದೇಶವಿದೆ. ಇದರಲ್ಲಿ 5 ಎಕರೆ ಪ್ರದೇಶದಲ್ಲಿ ಈಗಾಗಲೇ ಶೋಧ ಪೂರ್ಣಗೊಂಡಿದೆ. ಉಳಿದ 5 ಎಕರೆ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರಿದಿದೆ. ಇದರಲ್ಲಿ ಪ್ರಮುಖ ಸಾಕ್ಷಿ ದೂರುದಾರ ಚಿನ್ನಯ್ಯ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ತಲೆಬುರುಡೆ ಧರ್ಮಸ್ಥಳ ಸ್ನಾನಘಟ್ಟದ ಬಳಿಯ ಬಂಗ್ಲೆಗುಡ್ಡದಲ್ಲಿ ಪತ್ತೆಯಾಗಿದೆ. ಈ ಸ್ಥಳವನ್ನು ಪಾಂಗಾಳದ ವಿಠ್ಠಲ್ ಗೌಡ ತೋರಿಸಿದ್ದಾಗಿ ತನಿಖೆಯಲ್ಲಿ ತಿಳಿದುಬಂದಿದೆ.

ವಿಠ್ಠಲ್ ಗೌಡ ಅವರು ನಾನು ತೋರಿಸಿದ ಜಾಗದಲ್ಲಿಯೇ ತಲೆಬುರುಡೆ ಸಿಕ್ಕಿವೆ ಎಂಬ ಹೇಳಿಕೆಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ಎಸ್ಐಟಿ ಅಧಿಕಾರಿಗಳು ಅವರು ತೋರಿಸಿದ ಸ್ಥಳಕ್ಕೆ ತೆರಳಿ ಮತ್ತಷ್ಟು ಶೋಧ ಆರಂಭಿಸಿದರು. ಈ ವೇಳೆ ನೆಲದ ಮೇಲೆಯೇ ಹಲವಾರು ಮೂಳೆಗಳು ಕಂಡುಬಂದಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣಕ್ಕೆ ಇನ್ನೂ ಬಹುಪಾಲು ಉತ್ತರಗಳು ಸಿಗಬೇಕಿವೆ. ಅವಶೇಷಗಳು ಯಾರದು? ಇವು ಆತ್ಮಹತ್ಯೆ ಪ್ರಕರಣಗಳೇ ಅಥವಾ ಇನ್ನೆನ್ನಾದರೂ ಬೇರೆ ಇದ್ಯಾ? ಅನ್ನೋದು ತನಿಖೆಯಿಂದ ಸತ್ಯಾಸತ್ಯತೆ ಹೊರ ಬರಬೇಕಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss