ಸಿಎಂ ಸಿದ್ದರಾಮಯ್ಯ ಅವರನ್ನು AICC ಓಬಿಸಿ ಸಮಿತಿಗೆ ನೇಮಕ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ರಾಷ್ಟ್ರ ರಾಜಕೀಯಕ್ಕೆ ತೆರಳುತ್ತಾರೆ ಅನ್ನೋ ಬಗ್ಗೆ ಚರ್ಚೆಗಳು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಪುತ್ರ, MLC ಯತೀಂದ್ರ ಸಿದ್ದರಾಮಯ್ಯನವರು ಮಾತನಾಡಿದ್ದಾರೆ.
ಯಾರ್ರಿ ಹೇಳಿದ್ದು ಮುಖ್ಯಮಂತ್ರಿ ಆದವರನ್ನು ಓಬಿಸಿ ಕಮಿಟಿಗೆ ಕಳುಹಿಸಿದ್ರೇ ಪ್ರಮೋಷನ್ನಾ ಆಗುತ್ತಾ. ಇದು ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧ ಪಟ್ಟಿಲ್ಲ. ಕೆಲವರು ಊಹೆ ಮಾಡಿಕೊಂಡು ಮಾತನಾಡುತ್ತಾರೆ. ಚರ್ಚೆ ಮಾಡುವವರಿಗೆ ಸಾಮಾನ್ಯ ಜ್ಞಾನ ಇರಬೇಕು ಎಂದು ಕಿಡಿಕಾರಿದ್ದಾರೆ. ಎಐಸಿಸಿ ಕಾರ್ಯದರ್ಶಿಯೇ ಸಿಎಂ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಮತ್ತು ಈ ಬಿಜೆಪಿ ಹೇಳಿಕೆಗಳನ್ನು ನಂಬಬೇಡಿ. ನಮ್ಮ ಸರ್ಕಾರ ಬಂದಾಗಿನಿಂದಲೂ ಸಿಎಂ ಬದಲಾಗುತ್ತಾರೆ ಅಂತಾ ಹೇಳುತ್ತಿದ್ದಾರೆ ಎಂದು ಡಾ. ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಉಚಿತ ಭಾಗ್ಯಗಳಿಂದ ಜನರು ಸೋಮಾರಿ ಆಗುತ್ತಿದ್ದಾರೆ ಎಂದಿರುವ ರಂಭಾಪುರಿ ಶ್ರೀಗಳಿಗೂ ಉತ್ತರ ಕೊಟ್ಟಿರುವ ಯತೀಂದ್ರ, ಇದನ್ನು ಈಗಲ್ಲ, ಕಳೆದ ಬಾರಿ ಗ್ಯಾರಂಟಿ ಭಾಗ್ಯ ಕೊಟ್ಟಾಗಲೂ ಹೀಗೇ ಹೇಳುತ್ತಿದ್ರು. ಯಾರಾದ್ರೂ ಸೋಮಾರಿಗಳಾದ್ರಾ? ಆಗಿಲ್ಲ ಬಡವರು ಹೊಟ್ಟೆ ತುಂಬ ಊಟ ತಿಂದರೆ ಸೋಮಾರಿ ಆಗುವುದಿಲ್ಲ. ಕೇವಲ ಅಕ್ಕಿ ಕೊಟ್ಟ ತಕ್ಷಣ ಎಲ್ಲವೂ ಸಿಗುವುದಿಲ್ಲ. ಜೀವನಕ್ಕಾಗಿ ಅವರು ದುಡಿಯುತ್ತಾರೆ ಎಂದು ರಂಭಾಪುರಿ ಶ್ರೀಗಳ ಹೇಳಿಕೆಗೆ ಡಾ. ಯತೀಂದ್ರ ತಿರುಗೇಟು ನೀಡಿದ್ದಾರೆ.
ಸಿಎಂ ಬದಲಾವಣೆ ಕುರಿತು ಮಾತನಾಡಿರುವ ಯತೀಂದ್ರ ನವೆಂಬರ್ ತಿಂಗಳಿಗೆ ನಮ್ಮ ತಂದೆ ಎರಡುವರೆ ವರ್ಷ ಪೂರೈಸುತ್ತಾರೆ. ಹಾಗಾಗಿ ಸಿಎಂ ಆಗುವ ಆಸೆ ಇಟ್ಟುಕೊಂಡಿರೋರು ಕೇಳ್ತಾರೆ. ಕೇಳೋದ್ರಲ್ಲಿ ತಪ್ಪಿಲ್ಲ, ಸಿಎಂ ಬದಲಾವಣೆ ಬಗ್ಗೆ ತೀರ್ಮಾನ ಮಾಡೋದು ಹೈಕಮಾಂಡ್ ಹಾಗೂ ಎಂ ಎಲ್ ಎಗಳ ನಿರ್ಧಾರ. ಆದರೆ ನನ್ನ ಪ್ರಕಾರ ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ