ಈ ಬಾರಿಯ ದಸರಾದಲ್ಲಿ ಬನ್ನಿಮಂಟಪದಲ್ಲಿ ವಾರಪೂರ್ತಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಆದರೆ ಜಿಲ್ಲಾಡಳಿತವು ಪ್ರತಿಯೊಂದು ಕಾರ್ಯಕ್ರಮಕ್ಕೂ ಪಾಸ್ ಕಡ್ಡಾಯಗೊಳಿಸಿರುವುದರಿಂದ ಸಾರ್ವಜನಿಕರಿಗೆ ಪ್ರವೇಶ ಸಿಗುವುದು ಕಷ್ಟ ಎನ್ನಲಾಗುತ್ತಿದೆ. ಈ ಬಾರಿ ನಾಲ್ಕು ದಿನ ಡ್ರೋನ್ ಶೋ, ಪಂಜಿನ ಕವಾಯತು ಹಾಗೂ ವೈಮಾನಿಕ ಪ್ರದರ್ಶನಗಳು ವಿಶೇಷ ಆಕರ್ಷಣೆ ಆಗಲಿವೆ.
ಇದುವರೆಗೆ ಪಂಜಿನ ಕವಾಯತು ಹೊರತುಪಡಿಸಿ ಇತರ ಕಾರ್ಯಕ್ರಮಗಳಿಗೆ ಉಚಿತ ಪ್ರವೇಶ ಇತ್ತು. ಕಳೆದ ವರ್ಷ ನಡೆದ ಡ್ರೋನ್ ಶೋಗೂ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಸಿಕ್ಕಿತ್ತು. ಆದರೆ ಈ ಬಾರಿ ಎಲ್ಲಾ ಕಾರ್ಯಕ್ರಮಗಳಿಗೆ ಪಾಸ್ ಅವಶ್ಯಕವಾಗಿದೆ. ಬೆಂಗಳೂರಿನ ಕಾಲ್ತುಳಿತ ಪ್ರಕರಣದ ಹಿನ್ನೆಲೆ, ವಿಜಯದಶಮಿಯ ಜಂಬೂ ಸವಾರಿಯಲ್ಲಿ ಆಸನ ಸಾಮರ್ಥ್ಯವನ್ನು 11 ಸಾವಿರದಷ್ಟು ಕಡಿತಗೊಳಿಸಲಾಗಿದೆ. ಬನ್ನಿಮಂಟಪಕ್ಕೂ ಸೀಮಿತ ಸಂಖ್ಯೆಯ ಜನರಿಗೆ ಮಾತ್ರ ಪಾಸ್ ಆಧಾರಿತ ಪ್ರವೇಶ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾಡಳಿತವು ಸಾರ್ವಜನಿಕರಿಗೆ ನೇರವಾಗಿ ಪಾಸ್ ನೀಡದೆ, ರಾಜಕಾರಣಿಗಳ ಕೈಗೆ ಹಂಚುತ್ತಿದೆ ಎಂಬ ಟೀಕೆ ವ್ಯಕ್ತವಾಗಿದೆ. ಪ್ರತಿಯೊಂದು ಕಾರ್ಯಕ್ರಮಕ್ಕೂ 30 ಸಾವಿರ ಪಾಸ್ ಮುದ್ರಿಸಲಾಗಿದ್ದು, ಈ ಬಾರಿ ಆನ್‌ಲೈನ್ ಟಿಕೆಟ್ ವ್ಯವಸ್ಥೆಯನ್ನೂ ಪ್ರಾರಂಭಿಸಲಾಗಿದೆ. ಡ್ರೋನ್ ಶೋಗೆ ₹1000, ಪಂಜಿನ ಕವಾಯತುಗೆ ₹1500, ಜಂಬೂ ಸವಾರಿಗೆ ₹3500 ಮತ್ತು ದಸರಾ ಗೋಲ್ಡ್ ಕಾರ್ಡ್‌ಗೆ ₹6500 ದರ ನಿಗದಿಯಾಗಿದೆ. ಟಿಕೆಟ್‌ಗಳನ್ನು mysoredasara.gov.in ವೆಬ್‌ಸೈಟ್‌ನಲ್ಲಿ ಪಡೆಯಬಹುದಾಗಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ