ನಾಡಹಬ್ಬ ದಸರಾ ಅಂಗವಾಗಿ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ರಂಗೋಲಿ ಸ್ಪರ್ಧೆಯನ್ನ ಆಯೋಜಿಸಲಾಗಿತ್ತು. ರಂಗೋಲಿ ಸ್ಪರ್ಧೆ ವೈಭವದಿಂದ ಜರುಗಿತು. ಕುರುಬರಹಳ್ಳಿಯ ಕಲಾವಿದ ಪುನೀತ್ ಅವರು ಅಂಬಾರಿ ಹೊತ್ತ ಅರ್ಜುನ ಆನೆಯ ಚಿತ್ರವನ್ನು ಮೂಡಿಸಿದ್ದು, ಅದಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಶಾಸಕ ಶ್ರೀ ವತ್ಸ ಸ್ಪರ್ಧೆಯನ್ನು ಉದ್ಘಾಟಿಸಿದರು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸುಮಾರು 150ಕ್ಕೂ ಹೆಚ್ಚು ಮಹಿಳೆಯರು ವಿಭಿನ್ನ ಕಲ್ಪನೆಗಳಲ್ಲಿ ರಂಗೋಲಿ ಬಿಡಿಸಿದರು. ತಮ್ಮ ಕಲಾತ್ಮಕತೆಯನ್ನು ಪ್ರದರ್ಶಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಹಿಳಾ ದಸರಾ ಉಪಸಮಿತಿ ವತಿಯಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಸ್ಪರ್ಧೆಯಲ್ಲಿ ಅಂಬಾರಿ ಹೊತ್ತ ಅರ್ಜುನ, ಚಾಮುಂಡೇಶ್ವರಿ ತಾಯಿ, ದುರ್ಗಾ ದೇವಿ, ದೇವಿಗೆ ಕಾವಲಾಗಿರುವ ಆನೆ, ನಂದಿ-ಶಿವಲಿಂಗ, ಚಾಮುಂಡಿ ಬೆಟ್ಟದ ಗೋಪುರದ ಚಿತ್ರಗಳನ್ನ ಬಿಡಿಸಿದ್ದರು. ಓಂನಲ್ಲು ಮೂಡಿಸಿದ ಗಣೇಶ, ಗಂಡಬೇರುಂಡ, ನವಿಲು, ರಥ, ಬಾಲಕೃಷ್ಣ ಮುಂತಾದ ನಾನಾ ಪರಿಕಲ್ಪನೆಗಳ ರಂಗೋಲಿಗಳು ಗಮನ ಸೆಳೆದವು.
ಮಕ್ಕಳು ಮೊಬೈಲ್‌ಗೆ ಅತಿ ಹೆಚ್ಚು ಪ್ರಭಾವಿತರಾಗುತ್ತಿದ್ದಾರೆ. ಈ ಪರಿಕಲ್ಪನೆಯಲ್ಲಿ ‘ಡೋಂಟ್ ಬಿ ಅಡಿಕ್ಟೆಡ್’ ಶೀರ್ಷಿಕೆಯಲ್ಲಿ ನಂಜನಗೂಡಿನ ಶ್ವೇತಾ ಟಿ.ಡಿ. ರಂಗೋಲಿ ಬಿಡಿಸಿದರು. ಸರ್ಕಾರದ ಗೃಹಜ್ಯೋತಿ ಯೋಜನೆಯ ಹಿನ್ನೆಲೆಯೊಂದಿಗೆ ‘ಮಹಿಳೆ ಮತ್ತು ದೀಪ’ ಎಂಬ ಕಲಾತ್ಮಕ ಚಿತ್ರಣವನ್ನು ಮೈಸೂರಿನ ಸ್ಪಂದನ ರಂಗೋಲಿ ಬಿಡಿಸಿದರು. ತುಮಕೂರಿನ ನಿರ್ಮಲಾ ಹುಲಿ ಮೇಲೆ ಕುಳಿತ ಚಾಮುಂಡೇಶ್ವರಿ ಚಿತ್ರ ಬಿಡಿಸಿದರು.
ಜೊತೆಗೆ ದಾವಣಗೆರೆಯ ಲಕ್ಷ್ಮಿ ‘ಹೆಣ್ಣಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಪಡೋಣ’ ಎಂಬ ಸಂದೇಶವನ್ನೊಳಗೊಂಡ ರಂಗೋಲಿಯನ್ನು ಬಿಡಿಸಿದರು. ವಿಜಯನಗರದ ಸುನಿತಾ ನಂದಿ ಮತ್ತು ಶಿವಲಿಂಗ ಚಿತ್ರವನ್ನ ಬಿಡಿಸಿದ್ದರು. ಇದೆ ಸಂದರ್ಭದಲ್ಲಿರಂಗೋಲಿ ಸ್ಪರ್ಧೆಯಂತಹ ಕಾರ್ಯಕ್ರಮಗಳು ದಸರಾ ಮಹೋತ್ಸವಕ್ಕೆ ಮತ್ತಷ್ಟು ಕಳೆಕಟ್ಟುತ್ತಿವೆ ಎಂದು ಶಾಸಕ ಶ್ರೀ ವತ್ಸ ತಿಳಿಸಿದರು.
ವರದಿ : ಲಾವಣ್ಯ ಅನಿಗೋಳ