ಮಂಡ್ಯ : ಇದೇ ಸೆಪ್ಟಂಬರ್ 6 ರಿಂದ ರಾಜ್ಯ ಪ್ರವಾಸ ಕೈಗೊಳ್ಳಲಿರುವ ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು-ಬೆಂಗಳೂರು ದಶಪಥ ರಸ್ತೆ ಅಭಿವೃದ್ಧಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ಕೂಸು. ಈ ರೀತಿಯ ರಸ್ತೆ ಆಗಲೇಬೇಕೆಂಬ ದೃಷ್ಟಿಯಿಂದ ಕೇಂದ್ರ ಹೆದ್ದಾರಿ ಸಚಿವರೆ ಜವಾಬ್ದಾರಿ ವಹಿಸಿರುವುದು ಶ್ಲಾಘನೀಯ ಎಂದರು.
ಇದೀಗ ನಡೆಯುತ್ತಿರುವ ಕಾಮಗಾರಿಯ ಸಂದರ್ಭದಲ್ಲಿ ಎಲ್ಲೆಲ್ಲಿ ಸಣ್ಣ ಪುಟ್ಟ ನೂನ್ಯೆತೆಗಳಿವೆಯೋ ಅವುಗಳನ್ನು ಸರಿಪಡಿಸುವ ಕೆಲಸ ಮಾಡಲಾಗುವುದು. ಹೆದ್ದಾರಿಯಲ್ಲಿ ಯಾವುದೇ ನೂನ್ಯತೆಗಳಿಲ್ಲ. ಸೇವಾ ರಸ್ತೆಯಲ್ಲಿ ಕೆಲ ತೊಂದರೆಯಾಗಿದೆ. ನಿಡಘಟ್ಟ ಸೇರಿದಂತೆ ಕೆಲವಾರು ಹಳ್ಳಿಗಳ ಬಳಿ ಆಗಿರುವ ತೊಂದರೆ ನಿವಾರಣೆ ಸಂಬAಧ ಮುಖ್ಯಮಂತ್ರಿಗಳ ಜೊತೆ ಮಾತನಾಡಲಾಗುವುದು ಎಂದರು.
ಅಧಿಕ ಮಳೆಯಿಂದ ಈ ಸಮಸ್ಯೆ ಕಂಡು ಬಂದಿದೆ. ಅದಕ್ಕಿಂತ ಮುಂಚೆ ಈ ಸಮಸ್ಯೆ ಆಗಿರಲಿಲ್ಲ. ಸೇವಾ ರಸ್ತೆಗಳಲ್ಲಿ ಕೆಲ ಸಮಸ್ಯೆ ಕಂಡು ಬಂದಿದೆ. ಅದನ್ನೆ ಪರಿಶೀಲನೆ ಮಾಡುವ ಸಲುವಾಗಿಯೇ ಇಂದು ಬಂದಿದ್ದು. ಶೀಘ್ರವೇ ಇದನ್ನು ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.