ಮೈಸೂರು ನಗರದಲ್ಲಿ ನಿರ್ಮಾಣವಾಗಲಿರುವ ಎರಡು ಫ್ಲೈಓವರ್ ಯೋಜನೆಗಳ ವಿರುದ್ಧ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಮ್ಮ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜೆಎಲ್‌ಬಿ ಮತ್ತು ವಿನೋಬಾ ರಸ್ತೆಗಳು ಮೈಸೂರಿನ ಪಾರಂಪರಿಕ ಸೌಂದರ್ಯದ ಸಂಕೇತವಾದ ಪ್ರಮುಖ ರಸ್ತೆಗಳು. ಇವುಗಳಲ್ಲಿ ಫ್ಲೈಓವರ್ ನಿರ್ಮಿಸುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು. ಜನಾಭಿಪ್ರಾಯವನ್ನು ಪಡೆಯದೇ ಸರ್ಕಾರ ಡಿಪಿಆರ್ ಸಿದ್ಧಪಡಿಸುತ್ತಿದೆ ಎಂಬುದು ಅಸಮಂಜಸ ಕ್ರಮ ಎಂದು ಅವರು ಹೇಳಿದರು.
ವಿನೋಬಾ ರಸ್ತೆಯಲ್ಲಿ ಫ್ಲೈಓವರ್ ನಿರ್ಮಿಸಿದರೆ ನೂರಾರು ಮರಗಳ ನಾಶವಾಗುವ ಭೀತಿ ಇದೆ ಎಂದು ಎಚ್ಚರಿಸಿದರು. ಮೈಸೂರಿನ ಹಸಿರು ಸೌಂದರ್ಯವನ್ನು ಹಾಳು ಮಾಡುವ ರೀತಿಯ ಅಭಿವೃದ್ಧಿ ಕೆಲಸಗಳಿಗೆ ನಾವು ವಿರೋಧಿ ಎಂದರು. ನಗರ ಪಾರಂಪರಿಕತೆಯನ್ನು ಉಳಿಸಿಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ರೇಟರ್ ಮೈಸೂರು ಸಭೆಯಲ್ಲಿ ಸಲಹೆ ನೀಡಿದ್ದನ್ನು ನೆನಪಿಸಿದರು.
ಫ್ಲೈಓವರ್ ನಿರ್ಮಾಣವೇ ಶಾಶ್ವತ ಪರಿಹಾರವಲ್ಲ. ಮೈಸೂರಿಗೆ ಮೆಟ್ರೊ ರೈಲು ಬೇಕಾದರೆ ಅದನ್ನು ಮುಂಬೈ ಮಾದರಿಯ ಅಂಡರ್‌ಗ್ರೌಂಡ್‌ನಲ್ಲಿ ನಿರ್ಮಿಸಬಹುದು. ಜನಸಂಖ್ಯೆಗೆ ತಕ್ಕ ರೀತಿಯ ಅಭಿವೃದ್ಧಿ ಆಗಬೇಕು ಎಂದು ಅಭಿಪ್ರಾಯಪಟ್ಟರು. ಯದುವೀರ್ ಎಚ್ಚರಿಕೆ ನೀಡಿದ್ದು, ಸರ್ಕಾರ ಈ ವಿರೋಧದ ನಡುವೆಯೂ ಫ್ಲೈಓವರ್ ಕಾಮಗಾರಿ ಮುಂದುವರಿಸಿದರೆ ಕಾನೂನಾತ್ಮಕ ಹೋರಾಟ ಕೈಗೊಳ್ಳಲಾಗುವುದು ಎಂದಿದ್ದಾರೆ. ಜನರ ಸಹಕಾರದೊಂದಿಗೆ ಶಾಂತ ಹೋರಾಟ ರೂಪಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಗ್ರೇಟರ್ ಮೈಸೂರು ಯೋಜನೆ ಒಳಿತಾದರೂ ಅದಕ್ಕೆ ತಕ್ಕ ಪೂರ್ವ ತಯಾರಿ ಅಗತ್ಯ ಎಂದು ಅವರು ಹೇಳಿ, ಬೆಂಗಳೂರು ಮಾದರಿಯ ಅವೈಜ್ಞಾನಿಕ ನಿರ್ಮಾಣ ಮೈಸೂರಿನಲ್ಲಿ ನಡೆಯಬಾರದು ಎಂದು ಎಚ್ಚರಿಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

