ಆರೋಗ್ಯಕ್ಕಾಗಿ ಬೆಳಗಿನ ʼವಾಕಿಂಗ್‌ʼ! ಹೋದವರು ಸ್ಮಶಾನ ಸೇರಿದ್ರಾ..?

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಚನ್ನಮ್ಮ ಕಾಲೇಜ್ ಬಳಿ ಬೀಕರ ಅಪಘಾತ ನಡೆದಿದೆ. ವಾಕಿಂಗ್‌ ಮಾಡುತ್ತಿದ್ದ ಇಬ್ಬರು ಪಾದಚಾರಿಗಳ ಮೇಲೆ ಕಾರು ಹರಿದ ಪರಿಣಾಮ ಇಬ್ಬರು ವ್ಯಕ್ತಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು 48 ವರ್ಷದ ಶಿವಾನಂದ ಹುಲಕೋಟಿ ಹಾಗೂ 40 ವರ್ಷದ ಅಶೋಕ್ ಸರ್ವಿ ಎಂದು ಗುರುತಿಸಲಾಗಿದೆ. ಮಾಹಿತಿಯ ಪ್ರಕಾರ, ಇಬ್ಬರೂ ಬೆಳಗಿನ ಜಾವ ಅಂಬೇಡ್ಕರ್ ಬಡಾವಣೆಯಿಂದ ವಾಕ್ ಮುಗಿಸಿ ಮರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಕಾರ್ ಮಹಾರಾಷ್ಟ್ರದಿಂದ ಲಕ್ಷ್ಮೇಶ್ವರ ಕಡೆಗೆ ಬರುತ್ತಿದ್ದು, ಚನ್ನಮ್ಮ ಸರ್ಕಲ್ ಬಳಿ ಚಾಲಕನಿಗೆ ನಿದ್ದೆ ಮಂಪರು ಉಂಟಾಗಿದೆ. ಈ ವೇಳೆ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿ ನಡೆದು ಹೋಗುತ್ತಿದ್ದ ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಪಾದಚಾರಿ ಗಾಯಗೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಘಟನೆ ನಡೆದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಲಕ್ಷ್ಮೇಶ್ವರ ಠಾಣೆ ಪೊಲೀಸರು, ಪ್ರಕರಣವನ್ನ ದಾಖಲಿಸಿಕೊಂಡು ಮುಂದಿನ ತನಿಖೆ ಆರಂಭಿಸಿದ್ದಾರೆ.

ಆರೋಗ್ಯ ಕಾಯ್ದುಕೊಳ್ಳಲು ಬೆಳಗಿನ ವಾಕಿಂಗ್‌ಗೆ ಹೋದವರು ಪ್ರಾಣ ಕಳೆದುಕೊಂಡು ಸ್ಮಶಾನ ಸೇರಿರುವ ಈ ಆಘಾತಕಾರಿ ಘಟನೆ ಸ್ಥಳೀಯರಲ್ಲಿ ಭಯ ಮೂಡಿಸಿದೆ. ರಸ್ತೆ ಸುರಕ್ಷತೆ ಕುರಿತು ಮತ್ತೆ ಚರ್ಚೆ ಆರಂಭವಾಗಿದೆ.

About The Author