ಬೆಂಗಳೂರು: ಕರುಣ್ ನಾಯರ್ ಅವರ ಸೋಟಕ ಬ್ಯಾಟಿಂಗ್ ನೆರೆವಿನಿಂದ ಮೈಸೂರು ವಾರಿಯರ್ಸ್ ಹುಬ್ಬಳ್ಳಿ ಟೈಗರ್ಸ್ ವಿರುದ್ಧ 10 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿದೆ.
ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ವಡೆಯರ್ ಮೈದಾನದಲ್ಲಿ ನಡೆದ ಏಳನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಮೈಸೂರು ವಾರಿಯರ್ಸ್ ಫೀಲ್ಡಿಂಗ್ ಆಯ್ದುಕೊಂಡಿತು.
ಹುಬ್ಬಳ್ಳಿ ಟೈಗರ್ಸ್ ಪರ ಲುವಿನಿತ್ ಸಿಸೋಡಿಯಾ 38, ಶಿವಕುಮಾರ್ 6, ನವೀನ್ 5, ಲಿಯಾನ್ ಖಾನ್ 26, ಶಿಶಿರ್ ಭವಾನೆ 1, ಸಾಗರ್ ಸೋಲಂಕಿ 8, ನಾಯಕ ಅಭಿಮನ್ಯು ಮಿಥುನ್ 7, ತುಷಾರ್ ಸಿಂಗ್ 36 ರನ್ ಗಳಿಸಿದರು. ಹುಬ್ಬಳ್ಳಿ ಟೈಗರ್ಸ್ ನಿಗದಿತ 20 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿತು.
ಕರುಣ್ ನಾಯರ್ ಸೋಟಕ ಬ್ಯಾಟಿಂಗ್
141 ರನ್‍ಗಳ ಗುರಿ ಬೆನ್ನತ್ತಿದ ಮೈಸೂರು ವಾರಿಯರ್ಸ್ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೇ ಸುಲಭ ಗೆಲುವು ದಾಖಲಿಸಿತು. ನಿಹಾಲ್ ಉಳ್ಳಾಲ್ ಅಜೇಯ 48, ನಾಯಕ ಕರುಣ್ ನಾಯರ್ 52 ಎಸೆತದಲ್ಲಿ 11 ಬೌಂಡರಿ 3 ಸಿಕ್ಸರ್ ಸಹಿತ ಅಜೇಯ 91 ರನ್ ಗಳಿಸಿದರು. ಮೈಸೂರು ತಂಡ 15.5 ಓವರ್‍ಗಳಲ್ಲಿ 141 ರನ್ ಗಳಿಸಿತು.




