www.karnatakatv.net: ಬಸವರಾಜ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿ 100 ದಿನವನ್ನು ಪೂರೈಸಿದ್ದಾರೆ.
ಹಿರಿಯ ನಾಯಕ ಯಡಿಯೂರಪ್ಪ ಕೆಳಗಿಳಿದು ನೂತನ ಸಿಎಂ ಆಗಿ ಬೊಮ್ಮಾಯಿ ಅವರು ಅಧಿಕಾರವನ್ನು ಸ್ವೀಕರಿಸಿ 100 ದಿನಗಳು ಆಗಿದ್ದು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಕೆಲ ದಿನಗಳ ಬಳಿಕ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿದ್ದರು. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ 2023ರ ವಿಧಾನಸಭೆ ಚುನಾವಣೆಯನ್ನು ಎದುರಿಸುತ್ತೇವೆ ಎಂದು ಘೋಷಿಸಿದ್ದರು.
ನಿನ್ನೆ ನಡೆದ ಹಾನಗಲ್ ಮತ್ತು ಸಿಂದಗಿ ಉಪ ಚುನಾವಣೆಯಲ್ಲಿ ಬಸವರಾಜ್ ಬೊಮ್ಮಾಯಿಗೆ ತವರು ಜಿಲ್ಲೆಯ ಮತದಾರರೇ ಕೈಕೊಟ್ಟಿದ್ದಾರೆ. ಹಾಗೇ ವಿಜಯಪುರ ಜಿಲ್ಲೆಯ ಸಿಂದಗಿ ಕ್ಷೇತ್ರದಲ್ಲಿ ಸಂಘಟಿತ ಹೋರಾಟದ ಪರಿಶ್ರಮದಿಂದ ಬಿಜೆಪಿ ಅಭ್ಯರ್ಥಿ ಜಯ ಗಳಿಸಿದ್ದಾರೆ. ಆದರೆ, ಹಾನಗಲ್ ನಲ್ಲಿ ಬಿಜೆಪಿ ಅಭ್ಯರ್ಥಿ ಹೀನಾಯ ಸೋಲು ಅನುಭವಿಸಿದ್ದಾರೆ. ಕರ್ನಾಟಕದ ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲಿ ಹೆಚ್ಚಿನ ಅಂತರದಲ್ಲಿ ಗೆದ್ದಿದ್ದರೂ, ಹಾನಗಲ್ ನಲ್ಲಿ ಹೀನಾಯ ಸೋಲು ಅನುಭವಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಇಬ್ಬರೂ ರಾಜ್ಯ ಬಿಜೆಪಿ ಘಟಕಕ್ಕೆ ಅಭಿನಂದನೆ ಸಲ್ಲಿಸಿಲ್ಲ. ಇದರಿಂದ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಮತ್ತಷ್ಟು ನಿರಾಶೆಯ ಮಡುವಿಗೆ ದೂಡಿದಂತಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿ ತವರು ಜಿಲ್ಲೆಯ ಕ್ಷೇತ್ರದಲ್ಲಿ ಗೆಲ್ಲದಿರುವುದರಿಂದ ಅಸಮಾಧಾನಗೊಂಡಿರುವ ಅಮಿತ್ ಶಾ- ಜೆ.ಪಿ. ನಡ್ಡಾ ಜೋಡಿ ರಾಜ್ಯ ಬಿಜೆಪಿ ಘಟಕಕ್ಕೆ ಅಭಿನಂದನೆ ಸಲ್ಲಿಸಿಲ್ಲ.
ಟ್ವೀಟ್ ಮೂಲಕ ಜಯ ದಾಖಲಿಸಿದವರಿಗೆಲ್ಲ ಅಭಿನಂದನೆ ಸಲ್ಲಿಸಿದ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಕರ್ನಾಟಕ ಬಿಜೆಪಿ ಘಟಕಕ್ಕೆ ಮಾತ್ರ ಅಭಿನಂದನೆ ಸಲ್ಲಿಸಿಲ್ಲ. ಈ ವಿಷಯದಿಂದ ಬಿಜೆಪಿ ಹೈಕಮಾಂಡ್ ಅಸಮಾಧಾನಗೊಂಡಿರುವ ಬಗ್ಗೆ ಸುಳಿವು ನೀಡಿದಂತಾಗಿದೆ. ನಿರೀಕ್ಷಿಸಿದಷ್ಟು ಫಲಿತಾಂಶ ಬಾರದ ಹಿನ್ನೆಲೆ ಅಭಿನಂದನೆ ಸಲ್ಲಿಸಿಲ್ಲ ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.